ದೊಡ್ಡಬಳ್ಳಾಪುರ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ ಖಂಡ್ರೆ,ಸತೀಶ್ ಜಾರಕಿಹೊಳಿ,ಸಲೀಂ ಅಹಮದ್ ಅವರ ಪದಗ್ರಹಣ ಸ್ವೀಕಾರ ಹಾಗೂ ಪ್ರತಿಜ್ಞಾ ದಿನವನ್ನು ತಾಲೂಕಿನ 30 ಸ್ಥಳಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ನೇರವಾಗಿ ವೀಕ್ಷಣೆ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಸ್ಥಳಗಳಲ್ಲಿ,ಹಾಗೂ ನಗರ ಭಾಗದ 6 ಸ್ಥಳಗಳ ವಿವಿಧ ಕಲ್ಯಾಣ ಮಂಟಪ ಮತ್ತು ಸಭಾ ಭವನಗಳಲ್ಲಿ ಡಿಜಿಟಲ್ ಪರದೆಗಳನ್ನು ಕಾರ್ಯಕ್ರಮ ವೀಕ್ಷಣೆಗೆ ಅಳವಡಿಸಲಾಗಿತ್ತು.ರಾಷ್ಟ್ರಧ್ವಜ ಹಾಗೂ ಪಕ್ಷದ ಧ್ವಜಗಳನ್ನು ಅನಾವರಣಗೊಳಿಸಲಾಯಿತು.ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಸಹ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮಗಳು ನಡೆಯುತ್ತಿದ್ದ ಸ್ಥಳಗಳ ಭಾಗದ ಕಾಂಗ್ರೆಸ್ ಮುಖಂಡರು, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಕ್ಷ ಸಂಘಟನೆಗಾಗಿ ಕಾರ್ಯಕರ್ತರು ಶ್ರಮವಹಿಸಬೇಕೆಂದು ಕರೆ ನೀಡಿದರು.