ದೊಡ್ಡಬಳ್ಳಾಪುರ: ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟ,ನಿರ್ದೇಶಕ ಶಿವಮಣಿ ಬುಧವಾರ ಸಾವಯವ ಕೃಷಿ ತಜ್ಞ ಶಿವನಾಪುರ ರಮೇಶ್ ಅವರನ್ನು ಭೇಟಿ ಮಾಡಿ ಅರ ಅರಣ್ಯ ಆದಾರಿತ ಕೃಷಿ,ತೋಟಗಾರಿಕೆ ಕುರಿತು ಮಾಹಿತಿ ಪಡೆದರು.
ಚಿತ್ರ ನಿರ್ದೇಶನದ ಬಿಡುವಿನ ವೇಳೆಯಲ್ಲಿ ಸುಸ್ಥಿರ ಕೃಷಿಯಲ್ಲಿ ತೊಡಗಿಸಿಕೊಂಡು ಪರಿಸರ, ಪ್ರಾಣಿ, ಪಕ್ಷಿಗಳೊಂದಿಗೆ ಬದುಕಬೇಕು ಎನ್ನುವ ಉದ್ದೇಶದೊಂದಿಗೆ ಮಾಗಡಿ ಸಮಿಪ ತೋಟ ಮಾಡಲು ಹೊರಟಿರುವುದಾಗಿ ತಿಳಿಸಿದ ಶಿವಮಣಿ ಅವರು, ನಮ್ಮ ತಂದೆ ಕೇರಳದಲ್ಲಿ ಗೋಡಂಬಿ ಕೃಷಿಕರಾಗಿದ್ದರು. ಆದರೆ ಬೆಂಗಳೂರಿಗೆ ಬಂದ ನಂತರ ಕೃಷಿಯಿಂದ ತುಂಬಾ ದೂರ ಬಂದಿದ್ದೆವು. ಈಗ ಮತ್ತೆ ಮಣ್ಣಿನೊಂದಿಗೆ ನಿಕಟ ಸಂಪರ್ಕದಲ್ಲಿ ಇರಬೇಕು ಎನ್ನುವ ಆಸೆ ಚಿಗುರಿದೆ. ಕರೊನಾ ಲಾಕ್ಡೌನ್ ನಂತರ ನಗರದಲ್ಲಿ ಬಹುತೇಕ ಜನ ಕೃಷಿಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ನಾನು ಒಂದು ವರ್ಷದಿಂದಲು ಕೃಷಿ ಕೆಲಸ ಆರಂಭಿಸಿ ತೆಂಗು, ಅಡಿಕೆ ಹಾಗೂ ಹೈನುಗಾರಿಕೆ ಆರಂಭಿಸುವ ಸಿದ್ದತೆಯಲ್ಲಿ ಇದ್ದೆ. ಶಿವನಾಪುರ ರಮೇಶ್ ಆವರ ಮಾರ್ಗದರ್ಶನದ ನಂತರ ಯಾವುದೇ ಗಿಡ ನೆಡುವುದು ಅಂದರೆ ಅದಕ್ಕೆ ಭೂಮಿಯ ಸಿದ್ದತೆ ಎಷ್ಟು ಮುಖ್ಯ ಎನ್ನುವುದು ಅರಿವಿಗೆ ಬಂದಿದೆ. ನಾವು ಒಂದು ಸಿನಿಮಾ ಸಿದ್ದತೆಗೆ ವರ್ಷಗಟ್ಟಲೆ ಪೂರ್ವ ಸಿದ್ದತೆ ಮಾಡಿಕೊಳ್ಳುತ್ತೇವೆ. ಆದರೆ ಸಸಿ ನೆಡುವುದೆಂದರೆ ಒಂದೇ ದಿನದಲ್ಲಿ ಗುಂಡಿ ತೋಡಿ ಗೊಬ್ಬರ ಹಾಕಿ ನೀರು ಕೊಟ್ಟರೆ ಸಸಿ ಬೆಳೆಯುತ್ತದೆ ಎನ್ನುವ ತಿಳುವಳಿಕೆಯೇ ತಪ್ಪು ಎನ್ನುವುದು ರಮೇಶ್ ಅವರ ನರ್ಸರಿಗೆ ಭೇಟಿ ನೀಡಿ ಮಾಹಿತಿ ಪಡೆದ ನಂತರ ಅರ್ಥವಾಗಿದೆ ಎಂದರು.
ಕರೊನಾ ಕಾರಣದಿಂದಾಗಿ ಲಾಕ್‌ಡೌನ್ ಜಾರಿಗೆ ಬಂದ ಮೇಲೆ ನಾವು ಪ್ರಕೃತಿಯೊಂದಿಗೆ ಎಷ್ಟೊಂದು ಎಚ್ಚರದಿಂದ ಬದುಕಬೇಕು ಎನ್ನುವುದು ಸಾಮಾನ್ಯ ಜನರಿಗೂ ಅರ್ಥವಾಗಿದೆ. ಇದನ್ನು ಮರೆತರೆ ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ಗಿಂತಲು ಭೀಕರವಾದ ವೈರಸ್ಗಳು ಹುಟ್ಟಿಕೊಂಡು ಮನುಕುಲವನ್ನೇ ನಾಶ ಮಾಡಲಿವೆ.ಲಾಕ್ಡೌನ್ ಕೃಷಿ ಹಾಗೂ ಕೃಷಿಕರಿಗೆ ಗೌರವ ತಂದುಕೊಟ್ಟಿದೆ ಎಂದು ಹೇಳಿದರು.
ಶಿವಮಣಿ ಅವರು ನಾಗಸಂದ್ರ ಗ್ರಾಮದ ಕೃಷಿಕ ಮುದ್ದಪ್ಪ ಅವರ ತೋಟಕ್ಕೆ ಭೇಟಿ ನೀಡಿ ವಿವಿಧ ಸಸಿಗಳ ಬೆಳವಣಿಗೆ ಕುರಿತು ಮಾಹಿತಿ ಪಡೆದರು.