ದೊಡ್ಡಬಳ್ಳಾಪುರ: ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಡೆಯುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ.ನಾಯಕ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2020–21ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನಿಶ್ಚಿತ ಕೃಷಿಯಲ್ಲಿ ನಿಶ್ಚಿತ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಬಜಾಜ್ ಅಲಾಯನ್ಸ್ ಕಂಪೆನಿ, ಇವರ ಸಹಯೋಗದೊಂದಿಗೆ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ಸಾಲು ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಈ ಮುಂಗಾರು ಹಂಗಾಮಿನಲ್ಲಿ ಎಲ್ಲಾ ರೈತರು ಸೇರಿದಂತೆ ಬೆಳೆ ಸಾಲ ಪಡೆಯದ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಪಾಸ್ ಪುಸ್ತಕ, ಕಂದಾಯ ರಶೀದಿಯನ್ನು ನೀಡುವುದು. ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು ಎಂದರಲ್ಲದೆ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದೇ ಇದ್ದಲ್ಲಿ, ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ ಏಳು ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಗೆ ಪತ್ರವನ್ನು ನೀಡಿದಲ್ಲಿ ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ಅಧಿಸೂಚಿತ ವಿಮಾ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ.25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ಎಲ್ಲಾ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ಅವರುಗಳ ಬೆಳೆ ವಿಮೆಯನ್ನು ರದ್ದುಪಡಿಸಲಾಗುವುದು. ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರಗಳೊಳಗೆ ಚಂಡಮಾರುತ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು. ಏಕದಳ/ದ್ವಿದಳ ಧಾನ್ಯಗಳಿಗೆ ವಿಮಾ ಮೊತ್ತದ ಶೇ.2. ರಷ್ಟು ಹಾಗೂ ವಾಣಿಜ್ಯ ಬೆಳೆಗಳಿಗೆ ಶೇ.5 ರಷ್ಟು ವಿಮಾ ಕಂತನ್ನು ರೈತರು ಪಾವತಿಸಬೇಕಾಗಿರುತ್ತದೆ. ರೈತರು ಬೆಳೆ ವಿಮೆ ನೊಂದಾಯಿಸಲು 2020 ನೇ ಸಾಲಿನಲ್ಲಿ ತೊಗರಿ (ಮಳೆಆಶ್ರಿತ) ಜುಲೈ–15, ತೊಗರಿ (ನೀರಾವರಿ) ಜುಲೈ–15, ಮತ್ತು ಟೊಮೊಟೊ ಜುಲೈ–15, ನೆಲಗಡಲೆ (ಮಳೆ ಆಶ್ರಿತ) ಜುಲೈ–31, ರಾಗಿ (ಮಳೆ ಆಶ್ರಿತ) ಆಗಸ್ಟ್–14, ರಾಗಿ (ನೀರಾವರಿ) ಆಗಸ್ಟ್–14, ಭತ್ತ (ನೀರಾವರಿ) ಆಗಸ್ಟ್–14, ಮುಸುಕಿನ ಜೋಳ (ನೀರಾವರಿ) ಆಗಸ್ಟ್–14, ಮುಸುಕಿನ ಜೋಳ (ಮಳೆ ಆಶ್ರಿತ) ಆಗಸ್ಟ್–14, ಹುರುಳಿ (ಮಳೆ ಆಶ್ರಿತ) ಆಗಸ್ಟ್–14, 2020, ರಂದು ಕೊನೆಯ ದಿನಾಂಕವಾಗಿರುತ್ತದೆ. ಹೆಚಿನ ಮಾಹಿತಿಗೆ ರೈತರು ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳನ್ನು ಅಥವಾ ಆಯಾ ತಾಲ್ಲೂಕಿನಲ್ಲಿರುವ ವಿಮಾ ಅಧಿಕಾರಿಗಳನ್ನು ಅಥವಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ ಅವರು ಸಭೆಯಲ್ಲಿ ತಿಳಿಸಿದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ವಿನುತಾ ಸೇರಿದಂತೆ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಉಪಸ್ಥಿತರಿದ್ದರು. ಸಭೆಯ ನಂತರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಮಾಹಿತಿ ಕುರಿತ ಕರಪತ್ರವನ್ನು ಅಪರ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.
ದೇವನಹಳ್ಳಿ ಎಡಿಎ ರೇವಣ್ಣಪ್ಪ,ತಾಂತ್ರಿಕ ಅಧಿಕಾರಿಗಳಾದ ರೂಪ,ರೇಣುಕಾಪ್ರಸನ್ನ,ವೆಂಕಟೇಶ್ ಮತ್ತಿತರಿದ್ದರು.