ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಯಲ್ಲಿ ಕೊವಿಡ್–19 ಸೋಂಕು ಹರಡದಂತೆ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಬುಧವಾರ ತೆರವು ಮಾಡಲಾಗಿದ್ದು, ತಾಲೂಕಿನಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಬಿಎಂಟಿಸಿ,ಸಾರಿಗೆ ಸಂಸ್ಥೆಯ ಬಸ್ಗಳು ಪುನರಾರಂಭವಾಗಿವೆ.
ಅಂಗಡಿ ಮುಗ್ಗಟ್ಟುಗಳು ತೆರೆದು,ವಾಣಿಜ್ಯ ವ್ಯವಹಾರಗಳುಆರಂಭವಾಗಿವೆ. ನಗರದ ಮಾರುಕಟ್ಟೆ ಪ್ರದೇಶ, ಚೌಕದ ವೃತ್ತ, ತಾಲೂಕು ಕಚೇರಿ ವೃತ್ತಗಳಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರ ಹೆಚ್ಚಾಗಿತ್ತು. ಬ್ಯಾಂಕ್ಗಳಲ್ಲಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು. ಸರ್ಕಾರಿ ಕಚೇರಿಗಳಲ್ಲಿಯೂ ವಿವಿಧ ಕೆಲಸಗಳಿಗಾಗಿ ಬರುತ್ತಿದ್ದ ಸಾರ್ವಜನಿಕರು ಸಂಖ್ಯೆ ಹೆಚ್ಚಾಗಿತ್ತು.
ಸರ್ಕಾರದ ಮಾರ್ಗಸೂಚಿಯಂತೆ ಸಭೆ ಸಮಾರಂಭಗಳು, ಸಿನಿಮಾ ಮಂದಿರಗಳ ತೆರವಿಗೆ ಅವಕಾಶವಿಲ್ಲ. ರಾತ್ರಿ 8 ರಿಂದ ಬೆಳಿಗ್ಗೆ 5ರವರೆಗೆ ಕರ್ಪ್ಯೂ ಮುಂದುವರೆಯಲಿದೆ. ಮದುವೆ ಹಾಗೂ ಅಂತ್ಯ ಸಂಸ್ಕಾರಕ್ಕೆ ನಿಯಮಾನುಸರ ಸೀಮಿತ ಜನರಿಗೆ ಅವಕಾಶವಿದ್ದು,ತಾಲೂಕು ಆಡಳಿತದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಹಸೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ತೆರೆದ ದೇವಾಲಯ: ಭಕ್ತಾದಿಗಳ
ಸಂಖ್ಯೆಯಲ್ಲಿ ವಿರಳ
ಕೊವಿಡ್–19 ಹಿನ್ನಲೆಯಲ್ಲಿ ಒಂದು ವಾರ ಮುಚ್ಚಲಾಗಿದ್ದ ತಾಲೂಕಿನ ಮುಜರಾಯಿ ಹಾಗೂ ಇತರೆ ಪ್ರಮುಖ ದೇವಾಲಯಗಳು ಆರಂಭವಾಗಿದ್ದು, ಭಕ್ತಾದಿಗಳಿಗೆ ದೇವರ ದರ್ಶನ ಪ್ರಾಪ್ತವಾಗುತ್ತಿದೆ.
ತಾಲೂಕಿನ ಪ್ರಸಿದ್ದ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯ, ಕನಸವಾಡಿಯ ಶ್ರೀ ಶನಿ ಮಹಾತ್ಮ ದೇವಾಲಯ, ನಗರದ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ, ಚಂದ್ರಮೌಳೇಶ್ವರ, ನೆಲದಾಂಜನೇಯ, ಸ್ವಯಂಭುಕೇಶ್ವರ, ನಗರೇಶ್ವರ, ರಾಮಲಿಂಗ ಚೌಡೇಶ್ವರಿ ದೇವಾಲಯ ಮೊದಲಾದ ದೇವಾಲಯಗಳು ತೆರೆದಿವೆಯಾದರೂ ಭಕ್ತಾದಿಗಳ ಸಂಖ್ಯೆ ಕಡಿಮೆ ಇತ್ತು.
ಘಾಟಿ ಸುಬ್ರಹ್ಮಣ್ಯ ದೇವಾಲಯ, ಹಾಗೂ ಕನಸವಾಡಿಯ ಶ್ರೀ ಶನಿ ಮಹಾತ್ಮ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿ ಒಳ ಬಿಡಲಾಗುತ್ತಿತ್ತು. ದೇವಾಲಯದ ಒಳಗೆ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ನೀಡದೇ,ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇತರೆ ಯಾವುದೇ ಸೇವೆಗಳು ನಡೆಯಲಿಲ್ಲ.