ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ತಿದ್ದುಪಡಿ ಕಾಯಿದೆ ವಿರೋಧಿಸಿ ರೈತ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯಾದ್ಯಂತ ಜನ ಕಲಾ ಮೇಳದ ರೀತಿ ಹೋರಾಟ ರೂಪಿಸಲು ಇಂದಿನ ದಲಿತ ಮುಖಂಡರೊಂದಿಗಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭೂ ಸುಧಾರಣಾ ಕಾಯಿದೆಗೆ ಸರ್ಕಾರ ತಿದ್ದುಪಡಿ ತಂದಿರುವ ಕುರಿತು ದಲಿತ ಸಂಘಟನೆಗಳ ಜೊತೆ ಇಂದು ನಡೆದ ಸಮಾಲೋಚನೆ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.
ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಿದ್ದುಪಡಿ ತಂದಿರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜನ ಕಲಾಮೇಳದ ರೀತಿಯ ಹೋರಾಟವೇ ಸೂಕ್ತ.ಇದಕ್ಕಾಗಿ ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಿದ್ದೇವೆ. ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಲು ಒಪ್ಪಿರುವುದರಿಂದ ನಮಗೆ ಇನ್ನಷ್ಟು ಬಲ ಬಂದಿದೆ. ಈ ಸಂಬಂಧ ಆಗಸ್ಟ್ ಮೊದಲ ವಾರದಲ್ಲಿ ಉಭಯ ಸಂಘಟನೆಗಳ ಪ್ರಮುಖರ ಸಭೆ ಕರೆಯಲಾಗುವುದು, ಅಲ್ಲಿ ಕಾರ್ಯಾಗಾರ ಆಯೋಜಿಸುವ ಕುರಿತಂತೆಯೂ ಚರ್ಚಿಸಲಾಗುವುದು.
ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಮುಖಂಡರ ಸಲಹೆ ಮೇರೆಗೆ ಈ ಹಿಂದೆ ನಾವು ಭೂ ಸುಧಾರಣೆ ಕಾಯಿದೆ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಹಳ್ಳಿ, ಹಳ್ಳಿಗಳಲ್ಲಿಯೂ ಹೋರಾಟ ನಡೆಸುವ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದರು.
ಈ ವೇಳೆ ಪಕ್ಷದ ಹಿರಿಯ ನಾಯಕರಾದ ಡಾ.ಎಚ್.ಸಿ. ಮಹಾದೇವಪ್ಪ, ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಗುರುಪ್ರಸಾದ್ ಕೆರಗೋಡು, ಬಸವರಾಜ ನಾಯಕ, ಎಂ.ಬಿ. ಶ್ರೀನಿವಾಸ, ಜನಾರ್ಧನ, ಎಂ. ವೆಂಕಟೇಶ, ಅಣ್ಣಯ್ಯ, ಗಂಗಾಧರಮೂರ್ತಿ, ಮುನಿಕೃಷ್ಣಪ್ಪ, ಬೆನ್ನಿಗಾನಹಳ್ಳಿ ರಾಮಚಂದ್ರ, ಕಾಂತರಾಜ, ಜಯರಾಮಯ್ಯ, ಜಂಬೂದೀಪ ಸಿದ್ದರಾಜು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.