ದೊಡ್ಡಬಳ್ಳಾಪುರ: ನಗರದ ರಾಜೀವ್‌ಗಾಂಧಿ ಬಡಾವಣೆಯಲ್ಲಿ ಶನಿವಾರ ಸಂಜೆ ಮನೆಯ ಹೊರಗೆ ನಿಂತಿದ್ದ ಬಾಲಕಿ ಮಾನ್ಯತ ಎಂಬಾಕೆಯ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.
ರಾಜೀವ್‌ಗಾಂಧಿ ಬಡಾವಣೆ ನಗರದ ಅಂಚಿನಲ್ಲಿ ಇರುವುದರಿಂದ ಈ ಭಾಗದಲ್ಲಿ ಕೋಳಿ ತ್ಯಾಜ್ಯವನ್ನು ತಂದು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಹೀಗಾಗಿ ನಾಯಿಗಳ ಸಂಖ್ಯೆ ಮಿತಿ ಮೀರಿ ಹೋಗಿದೆ. ಹಗಲಿನ ವೇಳೆಯಲ್ಲಿಯೇ ದೊಡ್ಡವರು ಸಹ ರಸ್ತೆಯಲ್ಲಿ ಏನಾದರು ಕೈಯಲ್ಲಿ ಹಿಡಿದುಕೊಂಡು ಮನೆಯ ಕಡೆಗೆ ಹೋಗುವುದೇ ಕಷ್ಟವಾಗಿದೆ. ನಗರಸಭೆಯವರು ನಾಯಿಗಳ ನಿಯಂತ್ರಣಕ್ಕೆ ಹಾಗೂ ಕೋಳಿ ತ್ಯಾಜ್ಯವನ್ನು ತಂದು ಎಲ್ಲೆಂದರಲ್ಲಿ ಬಿಸಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಬಾಲಕಿಯ ತಂದೆ ಬಸವರಾಜ್ ಆಗ್ರಹಿಸಿದ್ದಾರೆ.