ಬೆಂಗಳೂರು: ರಾಜ್ಯದಲ್ಲಿ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾವಯವ ಟಾಸ್ಕ್ ಪೋರ್ಸ್’(ಕಾರ್ಯಪಡೆ)ರಚಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.
ನಗರದ ಕೃಷಿ ಆಯುಕ್ತರ ಕಚೇರಿಯಲ್ಲಿ ರಾಜ್ಯ ಮಟ್ಟದ ಸಾವಯವ ಕೃಷಿ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿ ಅಧ್ಯಕ್ಷರಾದ ಆನಂದ್ ಉಪ್ಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
2004ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಸಾವಯವ ಕೃಷಿ ನೀತಿಯನ್ನು ಕರ್ನಾಟಕ ಸರ್ಕಾರವ ಹೊರತಂದಿದ್ದು ಇದರ ಪರಿಣಾಮವಾಗಿ ರಾಜ್ಯದಲ್ಲಿ ಹಲವಾರು ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳ ಅನುಷ್ಠಾನದಿಂದ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿ ಸಾವಯವ ವಿಸ್ತಿರ್ಣವನ್ನುಸುಮಾರು1.00ಲಕ್ಷ ಹೆಕ್ಟೇರ್ ಗಳಿಗೆ ವಿಸ್ತರಿಸಲಾಗಿದೆ. 2017ರಲ್ಲಿ ಸಾವಯವ ಕೃಷಿ ನೀತಿಯನ್ನು ಪರಿಷ್ಕರಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಸದರಿ ನೀತಿಯನ್ನು ಮತ್ತಷ್ಟು ಉತ್ತೇಜಿತ ಕಾರ್ಯಕ್ರಮಗಳನ್ನೊಳಗೊಂಡಂತೆ ದೇಶಕ್ಕೆ ಮಾದರಿಯಾಗುವಂತಹ ಸಮಗ್ರ ಸಾವಯವ ಕೃಷಿ ನೀತಿಯನ್ನು ಹೊರತರಬೇಕು ಎಂದರು.
ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ “ಬೆಂಗಳೂರು ಸಾವಯಕ ಕೃಷಿ ರಾಜಧಾನಿ” ಎಂದು ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ “ಕರ್ನಾಟಕವೇ ದೇಶದ ಸಾವಯವ ರಾಜಧಾನಿ” ಎನ್ನುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ಕಾರ್ಯಪಡೆ ಸಮಿತಿ ರಚಿಸುವಂತೆ ಬಿ.ಸಿ.ಪಾಟೀಲರು ಸೂಚಿಸಿದರು.
ಸಿರಿಧಾನ್ಯ ರೈತ ಸಿರಿಧಾನ್ಯ ಯೋಜನೆ ಯಶಸ್ವಿಯಾಗಿದ್ದು, ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ದೇಶೀಯ ಸ್ಥಳೀಯ ಔಷಧಿಭರಿತ ಸಿರಿಧಾನ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು.ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ಜೊತೆಗೆ ಸಿರಿಧಾನ್ಯಗಳ ಸಂಸ್ಕರಣೆಗೆ ಹೆಚ್ಚಿನ ಒತ್ತುಕೊಡವ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಲ್ಲದೇ ಉತ್ಪಾದಿಸಿದ ಸಿರಿಧಾನ್ಯಗಳ ಉತ್ಪನ್ನಗಳನ್ನು ಸರ್ಕಾರದ ಯೋಜನೆಗಳಾದ ಮಧ್ಯಾೂಹ್ನದ ಬಿಸಿಊಟ, ಸಾರ್ವಜನಿಕ ವಿತರಣಾವ್ಯವಸ್ಥೆ, ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವ ಆಹಾರಗಳು ಮುಂತಾದ ಕಾರ್ಯಕ್ರಮಗಳಡಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲು ಸಭೆಯಲ್ಲಿ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದರು.
ಆನಂದ್ ಉಪ್ಪಳ್ಳಿ ಮಾತನಾಡಿ, 2004-05 ನಲ್ಲಿ ಸಾವಯವ ಹೊಸ ಸಾವಯವ ನೀತಿ ಜಾರಿಯಾಗಿದ್ದು, 2017 ರಲ್ಲಿ ನೀತಿಯನ್ನು ಪರಿಷ್ಕರಿಸಲಾಗಿದ್ದು,ಈ ನಿಟ್ಟಿನಲ್ಲಿ ಸಾವಯವ ಕೃಷಿಯನ್ನು ಬೃಹತ್ ಮಟ್ಟದಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ರೂಪುರೇಷೆ ತಯಾರಿಸಬೇಕು. ಇದಕ್ಕಾಗಿ“ಸಾವಯವ ಟಾಸ್ಕ್ ಪೋರ್ಸ್’’ ರಚಿಸಬೇಕು ಎಂದರು.
ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಧುನಿಕ ಸಾವಯವ ತಾಂತ್ರಿಕತೆಗಳನ್ನು ಒಳಗೊಂಡ ಪ್ರಾತ್ಯಕ್ಷಿತೆಗಳನ್ನು ಮಾದರಿ ಕ್ಷೇತ್ರಗಳನ್ನಾಗಿ ಅಭಿವೃದ್ದಿಪಡಿಸಬೇಕು.ಸಾವಯವ ಉತ್ಫನ್ನಗಳ ಪ್ಯಾಕಿಂಗ್ನಲ್ಲಿ ಉತ್ಪಾದಕರ ಹೆಸರು, ಸರ್ವೇ ನಂ., ಉತ್ಪಾದನಾಪ್ರಮಾಣ, ಖರೀದಿ ಪ್ರಮಾಣಗಳ ಮಾಹಿತಿಗಳನ್ನು ಮುದ್ರಿಸಲು ನಿರ್ಣಯಿಸಲಾಯಿತು. ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ಜೊತೆಗೆ ಸಿರಿಧಾನ್ಯಗಳ ಸಂಸ್ಕರಣೆಗೆ ಹೆಚ್ಚಿನಒತ್ತುಕೊಡವ ಕಾರ್ಯಕ್ರಮಗಳನ್ನು ರೂಪಿಸಲು ತೀರ್ಮಾನಿಸಲಾಯಿತು.. ಹಾಗೂ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಹೆಚ್ಚಿನ ಪ್ರಚಾರ ಒದಗಿಸುವ ಸಲುವಾಗಿ “ಸಾವಯವಮಾತುಕತೆ” ಎಂಬ ಪ್ರಾಯೋಜಿತ ಕಾರ್ಯಕ್ರಮವನ್ನು ಆಕಾಶವಾಣಿ ಮುಖಾಂತರ ರಾಜ್ಯ ವ್ಯಾಪ್ತಿ ಬಿತ್ತರಿಸುವ ನಿರ್ಣಯ ಕೈಗೊಳ್ಳಲಾಯಿತು.
ರೈತ ಸಿರಿ ಯೋಜನೆಯಡಿ ಸಿರಿಧಾನ್ಯಗಳ ಜೊತೆಗೆ ಸ್ಥಳೀಯವಾಗಿ ಹಾಗೂ ವಿರಳವಾಗಿ ಬೆಳೆಯುವ
ಔಷಧೀಯ ಗುಣಗಳುಳ್ಳ ಹಾಗೂ ಹೆಚ್ಚಿನ ಪೌಷ್ಠಿಕಭರಿತ ದೇಶಿ ಭತ್ತ ಹಾಗೂ ಇನ್ನಿತರ ಬೆಳೆಗಳನ್ನು ಸೇರ್ಪಡಿಸುವ ಅವಶ್ಯಕತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಒಕ್ಕೂಟಗಳಿಂದ ಉತ್ಪಾದಿಸಿದ ಉತ್ಪನ್ನಗಳನ್ನು ಇಲಾಖೆಯಿಂದ ಹೊರತರಲಾಗಿರುವ ಬ್ರ್ಯಾಂಡ್ಗಳ ಹೆಸರಿನಲ್ಲಿ ಮಾರಾಟ ಮಾಡಲು ತಿಳಿಸಲಾಯಿತು ಹಾಗೂ ಉತ್ಪನ್ನಗಳ ಪ್ಯಾಕೆಟ್ ಗಳ ಮೇಲೆ ಉತ್ಪಾದಕರ ಹೆಸರು, ಸರ್ವೇ ನಂ., ಉತ್ಪಾದನಾ ಪ್ರಮಾಣ, ಖರೀದಿ ಪ್ರಮಾಣಗಳ ಮಾಹಿತಿಗಳನ್ನು ಮುದ್ರಿಸಿ ಮಾರಾಟಮಾಡಲು ಕ್ರಮಕೈಗೊಳ್ಳಲು ಎಲ್ಲಾ ಒಕ್ಕೂಟಗಳಿಗೆ ನಿರ್ದೇಶಿಸಲಾಯಿತು.