ದೊಡ್ಡಬಳ್ಳಾಪುರ: ಆಗಸ್ಟ್ 5 ರಂದು ಅಯೋದ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರದ ನಿರ್ಮಾಣದ ಶಿಲಾನ್ಯಾಸ ದಿನವನ್ನು ಮನೆ ಮನಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸುವ ಮೂಲಕ ವಿಜಯೋತ್ಸವ ಆಚರಿಸುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕರೆ ನೀಡಿರುವ ಹಿನ್ನಲೆಯಲ್ಲಿ ಅಂದಿನ ಆಚರಣೆಗಳ ಕುರಿತು ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದಿಂದ ಸಮಾಜಕ್ಕೆ ತಿಳಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಭಜರಂಗ ದಳದ ತುಮಕೂರು ವಿಭಾಗದ ಸಂಚಾಲಕ ನರೇಶ್ ರೆಡ್ಡಿ ತಿಳಿಸಿದ್ದಾರೆ.
ಆಗಸ್ಟ್ 5 ರಂದು ಶ್ರೀ ರಾಮ ಮಂದಿರ ನಿರ್ಮಾಣದ ಹಿನ್ನಲೆಯಲ್ಲಿ ಅನುಸರಿಸಬೇಕಿರುವ ಆಚರಣೆಗಳ ಕುರಿತ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಶ್ರೀ ರಾಮ ಮಂದಿರ ನಿರ್ಮಾಣದ 550 ವರ್ಷಗಳ ಕನಸು ಈಗ ನನಸಾಗುತ್ತಿದ್ದು, ಆ ಶುಭ ಗಳಿಗೆ ಸಮೀಪದಲ್ಲಿಯೇ ಇದೆ.ಈ ದಿಸೆಯಲ್ಲಿ ಪ್ರತಿ ಮನೆಗಳಲ್ಲಿಯೂ ಹಬ್ಬದ ಸಂಭ್ರಮ ಕಾಣಬೇಕು.ಶಿಲಾನ್ಯಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿರುವುದರಿಂದ ಆ.೫ರಂದು ಬೆಳಿಗ್ಗೆ 10.30ರಿಂದ ದೃಶ್ಯವಾಹಿನಿಗಳಲ್ಲಿ ಪ್ರಸಾರವಾಗುವ ನೇರ ಪ್ರಸಾರವನ್ನು ಎಲ್ಲರೂ ವೀಕ್ಷಿಸಬೇಕು. ಶ್ರೀರಾಮನನ್ನು ಸ್ಮರಿಸುವ ಮೂಲಕ ಮನೆಗಳ ಮೇಲೆ ಭಗವದ್ ಧ್ವಜ ಹಾರಿಸಿ, ಸಿಹಿ ಮಾಡಿ ಹಬ್ಬ ಆಚರಿಸಬೇಕಿದೆ ಎಂದರು.
ಭಜರಂಗ ದಳ ಹಾಗೂ ವಿಶ್ವ ಹಿಂದು ಪರಿಷತ್ ನಿಂದ 5 ಸಾವಿರ ಮನೆಗಳಿಗೆ ದೀಪಗಳು ಹಾಗೂ ಪಾಕೆಟ್ ಕ್ಯಾಲೆಂಡರ್ಗಳನ್ನು ನೀಡುವ ಮೂಲಕ ಶುಭ ಹಾರೈಸಲಾಗುತ್ತಿದೆ. ಶಿಲಾನ್ಯಾಸದ ದಿನದಂದು ದೀಪಗಳನ್ನು ಬೆಳಗುವಂತೆ ಮನವಿ ಮಾಡಲಾಗಿದೆ. ನಗರದ ನೆಲದಾಂಜನೇಯಸ್ವಾಮಿ, ಶ್ರೀ ರಾಮ ದೇವಾಲಯಗಳಿಂದ ಮೃತ್ತಿಕೆ, ತೀರ್ಥಗಳನ್ನು ಅಯೋದ್ಯೆಗೆ ಕಳುಹಿಸಿಕೊಡಲಾಗುತ್ತಿದೆ ಎಂದರು.
ಆ.5ರಂದು ಕರಸೇವಕರಿಗೆ ಅಭಿನಂದನೆ:
ಆ.5ರಂದು ಸಂಜೆ 4 ಗಂಟೆಗೆ ಕನ್ನಡ ಜಾಗೃತ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, 1992ರ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ತೆರಳಿದ್ದ ಕರಸೇವಕರಿಗೆ ಹಾಗೂ ಅಂದು ಹುತಾತ್ಮರಾದ ಸತೀಶ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದರು.
ವಿಶ್ವ ಹಿಂದು ಪರಿಷತ್ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ದೀಪಕ್ ಜೈನ್, ಭಜರಂಗ ದಳದ ಜಿಲ್ಲಾ ಸಂಚಾಲಕ ಮಧು ಬೇಗಲಿ, ತಾಲೂಕು ಸಂಚಾಲಕ ಭಾಸ್ಕರ್ ಭಗತ್, ಸಹ ಸಂಚಾಲಕ ಅರ್ಜುನ್ ವಿರಾಟ್ ಹಾಜರಿದ್ದರು.