ಬೆಂಗಳೂರು: ವಿದ್ಯುಚ್ಛಕ್ತಿ, ಇಂಟರ್ ನೆಟ್ ನೆಟ್ವರ್ಕ್ ಸಂಪರ್ಕ ಇಲ್ಲದ ಕಾರಣ ಚಂದನವಾಹಿನಿಯಲ್ಲಿ ಎಸೆಸೆಲ್ಸಿ ಮಕ್ಕಳಿಗೆ ಶಿಕ್ಷಣ ಇಲಾಖೆಯ ಕಡೆಯಿಂದ ಪ್ರಸಾರವಾಗುತ್ತಿರುವ ತರಗತಿಗಳನ್ನು ನೋಡುವ, ಪ್ರಯೋಜನ ಪಡೆಯುವ ಭಾಗ್ಯ ಇಲ್ಲ ಎಂದು ತನ್ನ ಅಳಲು ತೋಡಿಕೊಂಡಿದ್ದ ವಿದ್ಯಾರ್ಥಿಯ ಬಳಿಗೆ ಶಿಕ್ಷಣ ಸಚಿವರೆ ತೆರಳಿ ಸಮಸ್ಯೆ ಆಲಿಸಿರುವ ಘಟನೆ ಹೊಳಲೆ ಗ್ರಾಮದಲ್ಲಿ ನಡೆದಿದೆ.
ಈ ಕುರಿತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಆದರ್ಶ ಎಂಬ ವಿದ್ಯಾರ್ಥಿಗೆ ಉಂಟಾಗುತ್ತಿದ್ದ ಸಮಸ್ಯೆಯನ್ನು ವಿವರಿಸಿದ್ದು,ತಾವು ಕೈ ಗೊಂಡ ಕ್ರಮದ ಕುರಿತು ಈ ಕೆಳಕಂಡಂತೆ ವಿವರಿಸಿದ್ದಾರೆ.
ಮೂರು ದಿವಸಗಳ ಹಿಂದೆ ಓರ್ವ ಪತ್ರಕರ್ತ ಗೆಳೆಯರ ಮೂಲಕ ನನಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೊರಳೆ ಎಂಬ ಗ್ರಾಮದ ಆದರ್ಶ ಎಂಬ ಒಬ್ಬ ಬಾಲಕನ ಆಡಿಯೋ ಸಂದೇಶ ದೊರಕಿತು.
10ನೇ ತರಗತಿಯಲ್ಲಿ ಓದುತ್ತಿರುವ ಆದರ್ಶ ತನ್ನ ಹಳ್ಳಿಯಲ್ಲಿ ವಿದ್ಯುಚ್ಛಕ್ತಿ, ಇಂಟರ್ ನೆಟ್ ನೆಟ್ವರ್ಕ್ ಯಾವುದೂ ಇಲ್ಲದ ಕಾರಣ ಚಂದನವಾಹಿನಿಯಲ್ಲಿ ಎಸೆಸೆಲ್ಸಿ ಮಕ್ಕಳಿಗೆ ಶಿಕ್ಷಣ ಇಲಾಖೆಯ ಕಡೆಯಿಂದ ಪ್ರಸಾರವಾಗುತ್ತಿರುವ ತರಗತಿಗಳನ್ನು ನೋಡುವ, ಪ್ರಯೋಜನ ಪಡೆಯುವ ಭಾಗ್ಯ ಇಲ್ಲ ಎಂದು ತನ್ನ ಅಳಲು ತೋಡಿಕೊಂಡಿದ್ದ.
ಆ ಬಾಲಕನನ್ನು ಸಂಪರ್ಕಿಸಲು ಮಾಡಿದ ನನ್ನ ಪ್ರಯತ್ನ ಸಫಲವಾಗಲಿಲ್ಲ. ಆಗ ತಕ್ಷಣ ನಿರ್ಧರಿಸಿದೆ, ಹೊಳಲೆ ಗ್ರಾಮಕ್ಕೇ ಹೋಗಿ ಆದರ್ಶನನ್ನು ಅವನ ಮನೆಯಲ್ಲಿಯೇ ಭೇಟಿ ಮಾಡಬೇಕೆಂದು.
ಅದೇ ರೀತಿ ನಿನ್ನೆ ಗ್ರಾಮಕ್ಕೆ ಬೆಳಿಗ್ಗೆ 7.30 ಸುಮಾರಿಗೆ ಭೇಟಿಕೊಟ್ಟು ಅವನ ಮನೆಯಲ್ಲಿಯೇ ಆದರ್ಶ ಮತ್ತು ಅವನ ರೀತಿ ಸಮಸ್ಯೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆ. ಅವರ ಕಷ್ಟಸುಖಗಳನ್ನು ವಿಚಾರಿಸಿದೆ. ಅವರಿಗೆ ಏನಾದರೂ ಪರಿಹಾರ ಕೊಡುತ್ತೇನೆಂದು ಭರವಸೆ ನೀಡಿದೆ.
ನಂತರ ಅದೇ ತಾಲೂಕಿನ ಕಿತ್ತಲೆ ಗೂಳಿ ಹಂಚಿನಕೂಡಿಗೆ, ಹುಲುತಾಳು ಮತ್ತು ಬೈರದೇವರ ಗ್ರಾಮಗಳಿಗೂ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಮಾತನಾಡಿಸಿದೆ ಅವರೆಲ್ಲರ ಸಮಸ್ಯೆ ಆಲಿಸಿದೆ.
ಮೆಣಸಿನಹಾಡ್ಯ ಕ್ಕೆ ಹೋಗಿ ಅಲ್ಲಿ ಕಲ್ಪನಾ ಎಂಬ ವಿದ್ಯಾರ್ಥಿಯನ್ನು ಭೇಟಿ ಮಾಡಿದೆ. ಆಕೆ ಪರೀಕ್ಷೆಯ ಕೊನೆಯ ದಿನ ಮನೆಯಲ್ಲಿ ಅಡುಗೆ ಮಾಡುವಾಗ ಕಾಲು ಪೂರ್ತಿ ಸುಟ್ಟು ಹೋಗಿದ್ದರೂ ಸಹ ಧೈರ್ಯ ಮಾಡಿ ಪರೀಕ್ಷಾ ಕೇಂದ್ರಕ್ಕೆ ಬಂದು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದಳು.
ಅದೇ ರೀತಿ ಸಿಂಚನ ಎಂಬ ವಿದ್ಯಾರ್ಥಿಯನ್ನು ಭೇಟಿ ಮಾಡಿದೆ.ಆಕೆ ಪರೀಕ್ಷೆಯ ಮೊದಲನೆಯ ದಿನವೇ ಅಂದರೆಅಂದರೆ ಜೂನ್ 25ರಂದು ಪರೀಕ್ಷೆ ಮುಗಿಸಿ ಹೋದ ನಂತರ ಮನೆಯಲ್ಲಿ ಕಾಲುಜಾರಿ ಬಿದ್ದು ಸೊಂಟಕ್ಕೆ ಭಾರಿ ಪೆಟ್ಟು ಮಾಡಿಕೊಂಡಿದ್ದಳು. ಆದರೆ ಆ ಪೆಟ್ಟು, ಆ ನೋವು.. ಅವಳ ಆತ್ಮವಿಶ್ವಾಸವನ್ನು ಸೋಲಿಸಲಾಗಲಿಲ್ಲ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಆವಳಿಗೆ ಅನುಕೂಲವಾಗುವಂತೆ ಮನೆಯ ಬಾಗಿಲಿಗೇ ವಾಹನವೊಂದನ್ನು ಕಳಿಸಿ ಅವಳು ಸಾಧ್ಯವಾದಷ್ಟು ಆರಾಮಾಗಿ ಪರೀಕ್ಷಾ ಕೇಂದ್ರಕ್ಕೆ ಹಿತವಾಗುವ ರೀತಿಯಲ್ಲಿ ಕರೆದುಕೊಂಡು ಹೋಗಿ ಪರೀಕ್ಷಾ ಕೇಂದ್ರದಲ್ಲಿ ಸಹ ಸಿಂಚನಾಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಆಕೆ ತೊಂದರೆ ಇಲ್ಲದಂತೆ ಪರೀಕ್ಷೆ ಬರೆಯಲು ಅನುವುಮಾಡಿಕೊಟ್ಟಿದ್ದರು.
ನಂತರ ಕೊಪ್ಪದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ 8, 9, ಮತ್ತು 10 ತರಗತಿಗಳ ಮಕ್ಕಳಿಗೆ ಚಂದನ ತರಗತಿಗಳನ್ನು ಸೂಕ್ತ ವ್ಯವಸ್ಥೆ ಕಲ್ಪಿಸಲು ತೀರ್ಮಾನ ಕೈಗೊಂಡಿದ್ದೇವೆ. ಹೊಳಲೆ ಗ್ರಾಮಕ್ಕೆ ವಿದ್ಯುಚ್ಛಕ್ತಿ ವ್ಯವಸ್ಥೆ ಕಲ್ಪಿಸಲೂ ಸಹ ಅಗತ್ಯ ಕ್ರಮ ಕೈಗೊಳ್ಳಲು ಸಹ ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಡಿಡಿಪಿಐ, ಬಿಇಓ, ಸಮಾಜ ಕಲ್ಯಾಣ ಇಲಾಖೆ, ವಿದ್ಯುತ್ ವಿತರಣಾ ಇಲಾಖೆ ಗಳ ಹಾಗೂ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ನಿನ್ನೆ ಇಡೀ ದಿನ ಮಳೆಯಲ್ಲಿ ಆ ಗುಡ್ಡಗಾಡಿನ ರಸ್ತೆಗಳಲ್ಲಿ ಓಡಾಡಿ ಮಕ್ಕಳನ್ನು ಅವರ ಮನೆಗಳ ಪರಿಸರದಲ್ಲಿಯೇ ಕುಳಿತು ಮಾತನಾಡಿಸಿದ್ದು ನನಗೆ ಅತ್ಯಂತ ಸಂತಸ ತಂದಿದೆ.
ಅವರ ಸಮಸ್ಯೆಗಳಿಗೂ ಪರಿಹಾರ ಸಧ್ಯದಲ್ಲಿಯೇ ದೊರಕಿಸಿಕೊಡುವ ವಿಶ್ವಾಸ ನನ್ನದ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.