ದೊಡ್ಡಬಳ್ಳಾಪುರ: ಕೊವಿಡ್-19 ಸೋಂಕು ಹರಡುವ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಸರಳವಾಗಿ ಆಚರಿಸಲಾಗುತ್ತಿದ್ದು,ಅಧಿಕಾರಿಗಳು ಸರ್ಕಾರದ ಸೂಚನೆಯನ್ನು ಪಾಲಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗೊಂದಿಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಗುತ್ತಿತ್ತು.ಆದರೆ ಈ ಬಾರಿ ಕೊರೊನಾ ಪರಿಣಾಮದಿಂದಾಗಿ ಸೀಮಿತ ಮಟ್ಟದಲ್ಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲಾ ಮಕ್ಕಳು ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ.
ಅಧಿಕಾರಿಗಳು ಶಿಷ್ಟಾಚಾರದಂತೆ ಸಮಾರಂಭಕ್ಕೆ ಆಗಮಿಸಿ,ತಮ್ಮ ಹೊಣೆಗಾರಿಕೆ ನಿರ್ವಹಿಸಬೇಕು. ಮುಖ್ಯವಾಗಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ನಗರಸಭೆಗೆ ಹೆಚ್ಚಿನ ಜವಾಬ್ದಾರಿಯಿದ್ದು,ಸಮಾರಂಭದಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ,ಅಂತರ ಕಾಪಾಡಿಕೊಂಡು ಭಾಗವಹಿಸಬೇಕು.ವೇದಿಕೆ ನಿರ್ಮಾಣ ಸೇರಿದಂತೆ ಎಂದಿನಂತೆ ಕಾರ್ಯಕ್ರಮದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು.
ತಾಲೂಕಿನಲ್ಲಿ ನಿತ್ಯ ಕೊವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಮ್ಮೆಲ್ಲರ ಹೊಣೆಗಾರಿಕೆ ಹೆಚ್ಚಿದೆ. ನಿತ್ಯವೂ ಕೊವಿಡ್-19 ಬುಲೆಟನ್ ಬಿಡುಗಡೆ ಮಾಡಲಾಗುತ್ತಿದೆ ಇಂದು ಸಹ ಕೊವಿಡ್-19 ಒಬ್ಬರು ಮೃತಪಟ್ಟು ಸಾವಿನ ಸಂಖ್ಯೆ 17ಕ್ಕೆ ಏರಿದೆ.ತಾಲೂಕಿನಲ್ಲಿ ಎಲ್ಲರಿಗೂ ಈ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದರು.
ತಹಸೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಟಿ.ಎಸ್.ಶಿವರಾಜ್ ಮಾತನಾಡಿ,ಈ ಬಾರಿ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮೊದಲಾಗಿ ಕೊವಿಡ್ ವಾರಿಯರ್‍ಸ್‌ಗಳಿಗೆ ಸನ್ಮಾನ ಮಾಡಲಾಗುವುದು.ಸಮಾರಂಭದಲ್ಲಿ ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಲು ಶಾಲಾ ಮಕ್ಕಳನ್ನು ಕರೆಸಿಕೊಳ್ಳುವ ಕುರಿತು ಪರಿಶೀಲಿಸಿ ನಿರ್ಧರಿಸಿಸೋಣ ಎಂದರು.
ಸಭೆಯಲ್ಲಿ ಡಿವೈಎಸ್‌ಪಿ ಟಿ.ರಂಗಪ್ಪ,ತಾಲೂಕು ಪಂಚಾಯಿತಿ ಪ್ರಭಾರಿ ಅಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಕಾರ್ಯನಿರ್ವಹಣಾಕಾರಿ ಮುರುಡಯ್ಯ, ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್, ತಾಪಂ ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.