ಮಡಿಕೇರಿ: ಜಿಲ್ಲೆಯಲ್ಲಿ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಉಂಟಾಗುವ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವುದು ಹಾಗೂ ಕೋವಿಡ್-19 ನಿಯಂತ್ರಿಸುವಲ್ಲಿ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೋವಿಡ್ ನಿಯಂತ್ರಣ ಹಾಗೂ ಪ್ರಕೃತಿ ವಿಕೋಪ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಕಳೆದ 3 ವರ್ಷಗಳಿಂದ ಆಗಸ್ಟ್ ತಿಂಗಳಿನಲ್ಲಿ ಭಾರಿ ಮಳೆಯಾಗುತ್ತಿದೆ. ಆದ್ದರಿಂದ ತಗ್ಗು ಪ್ರದೇಶದಲ್ಲಿ ವಾಸಿಸುವ ಮತ್ತು ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಮೊದಲು ಜೀವ ರಕ್ಷಣೆಯತ್ತ ಪ್ರತಿಯೊಬ್ಬರೂ ಗಮನಹರಿಸಬೇಕು. ಎಂದು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಪ್ರಕೃತಿ ವಿಕೋಪ ಸಂಬಂಧ ವಿರಾಜಪೇಟೆ, ಕರಡಿಗೋಡು ಮತ್ತಿತರ 3 ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾಗಮಂಡಲದಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್, ಅರಣ್ಯ, ಅಗ್ನಿಸಾಮಕ, ಎನ್‍ಡಿಆರ್‍ಎಫ್ ತಂಡ, ಗೃಹ ರಕ್ಷಕ ದಳ, ಹೀಗೆ ಹಲವು ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾ.ಪಂ, ಪ.ಪಂ. ನಗರಸಭೆಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಈ ಸಂದರ್ಭ ಮಧ್ಯ ಪ್ರವೇಶಿಸಿ ಮಾತನಾಡಿದ ವಿ.ಅನ್ಬು ಕುಮಾರ್ ಅವರು, ಪರಿಹಾರ ಕೇಂದ್ರದಲ್ಲಿ ಬೆಡ್‍ಶೀಟ್, ಚಾಪೆ, ಶೌಚಾಲಯ ವ್ಯವಸ್ಥೆ ಇದೆಯೇ ಎಂದು ಗಮನಿಸಬೇಕು ಎಂದರು.
ವ್ಯಾಪಕ ಮಳೆಯಿಂದಾಗಿ ವಿದ್ಯುತ್ ಮಾರ್ಗಕ್ಕೆ ಮರ ಬೀಳುತ್ತಿದ್ದು, ಇದನ್ನು ತ್ವರಿತವಾಗಿ ಸರಿಪಡಿಸುವ ಕಾರ್ಯವಾಗಬೇಕು ವಿದ್ಯುತ್ ಇದ್ದಲ್ಲಿ ಇತರ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಹೇಳಿದರು.
ಕೋವಿಡ್ ನಿಯಂತ್ರಣ ಸಂಬಂಧ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಕೋವಿಡ್ ನಿಯಂತ್ರಿಸುವಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಗುರುತಿಸಿ ಕಡ್ಡಾಯವಾಗಿ ಆರೋಗ್ಯ ಪರೀಕ್ಷಿಸಬೇಕು ಎಂದರು.
ಕರೊನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಹೇಳಿದರು.
ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆ, ಬಿಸಿ ನೀರು ಮತ್ತಿತರ ಮೂಲ ಸೌಲಭ್ಯಗಳು ಇಲ್ಲ ಎಂಬ ದೂರುಗಳು ಕೇಳಿ ಬರಬಾರದು ಆ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ಮಾಡಿದರು.
ಕೋವಿಡ್ ಸೋಂಕಿತರು ಕಡ್ಡಾಯವಾಗಿ ಆರೋಗ್ಯ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ಪರೀಕ್ಷೆ ಮಾಡಿಸಿರುವವರು ಪರೀಕ್ಷಾ ವರದಿ ಬರುವವರೆಗೆ ಕಡ್ಡಾಯವಾಗಿ ಮನೆಯಲ್ಲಿರಬೇಕು. ಮತ್ತೊಬ್ಬರಿಗೆ ಸೋಂಕು ಹರಡದಂತೆ ಎಚ್ಚರವಹಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಜಿಲ್ಲೆಯಲ್ಲಿ ಇದುವರೆಗೆ 594 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ 231 ಸಕ್ರಿಯ ಪ್ರಕರಣಗಳಿವೆ. 10 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿ ತಾಲೂಕಿನಲ್ಲಿಯೂ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಕಂಡುಬಂದಂತಹ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಶನ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೀರಾಜಪೇಟೆಯಲ್ಲಿ ಅಂತರ ಜಿಲ್ಲಾ ಪ್ರಯಾಣ ಮಾಡಿದವರಲ್ಲಿ ಮತ್ತು ಅಂತರ ಜಿಲ್ಲಾ ಪ್ರಯಾಣ ಮಾಡಿದವರ ಪ್ರಾಥಮಿಕ ಸಂಪರ್ಕಿತರಲ್ಲಿ ಹೆಚ್ಚಿನ ಪಾಸಿಟಿವ್ ಪ್ರಕರಣ ಕಂಡುಬರುತ್ತಿದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮಾಹಿತಿ ನೀಡಿದರು.
ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಜಿ.ಪಂ ವತಿಯಿಂದ ಪ್ರಕೃತಿ ವಿಕೋಪ ಹಾಗೂ ಕೋವಿಡ್-19 ನಿರ್ವಹಣೆ ಸಂಬಂಧಿಸಿದಂತೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿ.ಪಂ ಸಿಇಒ ಕೆ.ಲಕ್ಷ್ಮೀ ಪ್ರಿಯ, ಕೊಡಗು ವೈದ್ಯಕೀಯ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಅಧೀಕ್ಷಕರಾದ ಲೋಕೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಹೇಶ್, ಸೆಸ್ಕ್ ಇಇ ಸೋಮಶೇಖರ್, ಪಶುಪಾಲನಾ ಇಲಾಖೆಯ ಉಪ ನಿರ್ದೆಶಕರಾದ ಡಾ.ತಮ್ಮಯ್ಯ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ನಾನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.