ದೊಡ್ಡಬಳ್ಳಾಪುರ: ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ತಡೆಗೆ ಜಾರಿಗೊಳಿಸಿರುವ ಫೊಕ್ಸೋ ಕಾಯಿದೆಯನ್ನು ಕಠಿಣಗೊಳಿಸಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ದ ಸದಸ್ಯರು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘನೆಯ ರಾಜ್ಯಾಧ್ಯಕ್ಷ ಕೆ.ನಾಗೇಶ್,ಧಾರವಾಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು, ಅವಮಾನ ತಾಳಲಾರದೆ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆ ಆರೋಪಿಗೆ ಅತ್ಯಂತ ತ್ವರಿತವಾಗಿ ಗಲ್ಲು ಶಿಕ್ಷೆ ಜಾರಿಯಾಗುವಂತೆ ಮಾಡಿ, ಆ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂತ್ರಸ್ತೆಯ ಪರವಾಗಿ ಸಂಘಟನೆ ಮನವಿ ಮಾಡುತ್ತಿದೆ ಎಂದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ಮಾತನಾಡಿ, ರಾಜ್ಯದಲ್ಲಿ ಅತ್ಯಾಚಾರ ಪ್ರಕರಣ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಎಲ್ಲಾ ಕ್ರಮಗಳು ಶ್ಲಾಘನೀಯವಾಗಿದ್ದರೂ ಸಹ ಅಲ್ಲೊಂದು, ಇಲ್ಲೊಂದು ಎಂಬಂತೆ ಅತ್ಯಾಚಾರದಂತಹ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಕಹಿ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಹಾಗೆಯೇ ಇನ್ನು ಮುಂದೆ ರಾಜ್ಯದಲ್ಲಿ ಅತ್ಯಾಚಾರದಂತಹ ಮಹಿಳಾ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ತಡೆಯಲು ಪೋಕ್ಸೋ ಕಾಯಿದೆಯ ನಿಯಮಗಳನ್ನು ಇನ್ನೂ ಕಠಿಣಗೊಳಿಸಿ,ಅಮಾಯಕ ಹೆಣ್ಣು ಜೀವಗಳು ರಾಜ್ಯದಲ್ಲಿ ನಿರ್ಭಿತರಾಗಿ ಜೀವನ ನಡೆಸುವಂತಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಎಲ್.ಆರಾಧ್ಯ, ಮುಖಂಡರಾದ ಜಿ.ಎನ್.ನರೇಂದ್ರ, ಪರಿಸರ ಅರವಿಂದ್, ದೊಡ್ಡೇಗೌಡ, ಹರ್ಷ, ಜಿ.ಎನ್.ಪ್ರದೀಪ್,ಬಿ.ಎಸ್.ಶಿವಶಂಕರ್, ನಾಗರಾಜು ಮತ್ತಿತರಿದ್ದರು.