ಕಲಬುರಗಿ: ಪರಿಶಿಷ್ಟ ಜನಾಂಗದ ಏಳಿಗೆಗಾಗಿ ಅವರ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಲಾಗಿದ್ದು, ರಾಜ್ಯಾದ್ಯಂತ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ 1041 ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.
ಭಾನುವಾರ ಸೇಡಂ ಪಟ್ಟಣದ ಸುವರ್ಣಾ ಕರ್ನಾಟಕ ಭವನದಲ್ಲಿ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸುಮಾರು 122 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ 47 ವಸತಿ ಶಾಲೆಗಳನ್ನು ಹೊಸದಾಗಿ ಮಂಜೂರು ಮಾಡಿದಲ್ಲದೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಇದಲ್ಲದೆ 181 ವಸತಿ ಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ ಒಟ್ಟಾರೆ 2450 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರು.
ಕಳೆದ ಸಾಲಿನಲ್ಲಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ 26000 ಕೋಟಿ ರೂ. ವಿನಿಯೋಗಿಸಲಾಗಿದೆ. ಇತರೆ ಸಮುದಾಯುದ ಮಕ್ಕಳಂತೆ ಎಸ್.ಸಿ-ಎಸ್.ಟಿ. ಮಕ್ಕಳು ಉತ್ತಮ ಮೂಲಭೂತ ಸೌಕರ್ಯದೊಂದಿಗೆ ಗುಣಮಟ್ಟದ ಶಿಕ್ಷಣ ಪಡೆದು ಸಮಾನ ಅಭಿವೃದ್ಧಿ ಹೊಂದಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ರಾಜ್ಯದ್ಯಾಂತ ಕಾರ್ಯನಿರ್ವಹಿಸುತ್ತಿರುವ 820 ವಸತಿ ಶಾಲೆಗಳ ಪೈಕಿ ಸ್ವಂತ ಕಟ್ಟಡಕ್ಕಾಗಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳು ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳಲಿವೆ. ಈ ಶಾಲೆಗಳಲ್ಲಿ ಸುಮಾರು 1.20 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ವಸತಿ ಸೌಲಭ್ಯ ನೀಡಲಾಗುತ್ತಿದೆ. ಊಟ, ವಸತಿ ನೀಡಿ ಕೇವಲ ಮಕ್ಕಳನ್ನು ದಷ್ಟಪುಷ್ಟ ಮಾಡುವುದಷ್ಟೆ ಅಲ್ಲಾ ಬದಲಾಗಿ ಅವರನ್ನು ಬುದ್ದಿವಂತರು, ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿ ಸಹ ಇಲಾಖೆ ಹೊತ್ತುಕೊಂಡಿದೆ. ಇತ್ತೀಚೆಗೆ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆ ಫಲಿತಾಂಶದಲ್ಲಿ ವಸತಿ ಶಾಲೆಗಳ ಮಕ್ಕಳ ಫಲಿತಾಂಶ ಕ್ರಮವಾಗಿ ಶೇ.94 ಮತ್ತು ಶೇ.86 ರಷ್ಟು ಬಂದಿದ್ದು, ಇದುವೇ ಸಾಕ್ಷಿಯಾಗಿದೆ. 14 ಜಿಲ್ಲೆಗಳಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ವಸತಿ ಶಾಲೆಯ ಮಕ್ಕಳು ಪ್ರಥಮ ಸ್ಥಾನದಲ್ಲಿದ್ದಾರೆ. ರಾಜ್ಯವಾರು Rankನಲ್ಲಿಯೂ ಈ ಮಕ್ಕಳ ಸಾಧನೆ ಅಮೋಘವಾಗಿದೆ ಎಂದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಸೇಡಂ ಉಪ ವಿಭಾಗದ ಸೇಡಂ, ಚಿಂಚೋಳಿ ಹಾಗೂ ಚಿತ್ತಾಪೂರ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 232 ಕೋಟಿ ರೂ., ಲೋಕೋಪಯೋಗಿ ಇಲಾಖೆಯಿಂದ 150 ಕೋಟಿ. ರೂ. ಹಾಗೂ ಡಿ.ಎಂ.ಎಫ್. ನಿಧಿಯಿಂದ 140 ಕೋಟಿ ರೂ.ಗಳು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ನಬಾರ್ಡ್ ಯೋಜನೆಯಡಿ 176 ಪ್ರಾಥಮಿಕ ಶಾಲೆಗಳ ನಿರ್ಮಾಣ ಕಾರ್ಯ ಸಹ ವಿಭಾಗದಲ್ಲಿ ಪ್ರಗತಿಯಲ್ಲಿದೆ ಎಂದ ಡಿ.ಸಿ.ಎಂ ಗೋವಿಂದ ಕಾರಜೋಳ ಅವರು ಬರ, ನೆರೆ ಹಾವಳಿ, ಇದೀಗ ಕೊರೋನಾ ಹೀಗೆ ಸಂಕಷ್ಟದ ಸಮಯದಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ನಿಲ್ಲಿಸಿಲ್ಲ ಎಂದರು.
ಕರೊನಾ ಲಾಕ್ ಡೌನ್ ಸಂದರ್ಭದಲ್ಲಿ ದಿನದ ದುಡಿಮೆ ಮೇಲೆ ಬದುಕು ಸಾಗಿಸುತ್ತಿದ್ದ ಕೃಷಿಕರು, ಬೀದಿ ಬದಿ ವ್ಯಾಪರಸ್ಥರು, ಉದ್ದಿಮೆಗಳು, ಹೂ-ಹಣ್ಣು ಬೆಳೆಗಾರರು, ಚಮ್ಮಾರರು, ಸವಿತಾ-ಹಡಪದ ಸಮಾಜದ ಬಂಧುಗಳು, ಕಾರ್ಮಿಕರು ಹೀಗೆ ವೃತ್ತಿ ಬಾಂಧವರಿಗೆ ದೇಶಕ್ಕೆ ಮಾದರಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2280 ಕೋಟಿ ರೂ. ಮೊತ್ತದ ಬೃಹತ್ ಮೊತ್ತದ ಪ್ಯಾಕೇಜ್ ಘೋಷಿಸಿ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಜಮೆ ಆಗುವಂತೆ ಮಾಡುವ ಮೂಲಕ ಸಂಕಷ್ಠದ ಸಮಯದಲ್ಲಿ ಸರ್ಕಾರ ಇವರ ನೆರವಿಗೆ ಧಾವಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ ತಾವು ಶಾಸಕನಾದ ಮೇಲೆ ಹಲವು ಹಲ್ಳಿಗಳಲ್ಲಿ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಇದರ ಪ್ರತಿಫಲವಾಗಿ ಇಂದು ಲೋಕೋಪಯೋಗಿ ಇಲಾಖೆಯ ವಿಭಾಗೀಯ ಕಚೇರಿ, ಹಳ್ಳಿಗಳಲ್ಲಿನ ರಸ್ತೆ ಸುಧಾರಣೆ, ವಸತಿ ನಿಲಯ ಹಾಗೂ ವಸತಿ ಶಾಲೆಗಳು ಒಳಗೊಂಡಂತೆ 75.72 ಕೋಟಿ ರೂ. ಮೊತ್ತದ 18 ಕಾಮಗಾರಿಗಳ ಲೋಕಾರ್ಪಣೆ ಮತ್ತು ಸಿ.ಸಿ. ರಸ್ತೆ, ರಸ್ತೆ ಸುಧಾರಣೆ, ಚರಂಡಿ ನಿರ್ಮಾಣ, ರಸ್ತೆ ವಿಭಜಕ ಮತ್ತು ವಿದ್ಯುತ್ ದೀಪ ಅಳವಡಿಕೆಗಳಂತಹ 46.60 ಕೋಟಿ ರೂ. ಮೊತ್ತದ 17 ಕಾಮಗಾರಿಗಳಿಗೆ ಅಡಿಗಲ್ಲು ಹಾಕಿ ಚಾಲನೆ ನೀಡಲಾಗಿದೆ ಎಂದರು.
ಕ್ಷೇತ್ರದಲ್ಲಿ ಹೊಲಗಳಿಗೆ ಹೋಗಲು ರಸ್ತೆ ಇಲ್ಲದ ಕಡೆ “ನಮ್ಮ ಹೊಲ-ನಮ್ಮ ದಾರಿ” ಯೋಜನೆಯಡಿ 25 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಕೋಡ್ಲಾದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆ, ಗುಂಡಹಳ್ಳಿಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಎಸ್.ಸಿ. ವಸತಿ ಶಾಲೆ ನಿರ್ಮಿಸಲಾಗುತ್ತಿದೆ. ಕ್ಷೇತ್ರದಲ್ಲಿ ಎಲ್ಲಾ ವರ್ಗಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದ ಅವರು ಕೊರೋನಾ ಸೋಂಕಿತ ವ್ಯಕ್ತಿಗಳ ಅರೈಕೆಗೆ ಕೋಡ್ಲಾ ವಸತಿ ಶಾಲೆಯಲ್ಲಿ 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗುತ್ತಿದೆ ಎಂದರು.
200 ಕೋಟಿ ಕ್ರಿಯಾ ಯೋಜನೆ ಸಿದ್ಧ: ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗದಂತೆ ತಾಲೂಕಿನ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ವರ್ಷದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ 40 ಕೋಟಿ ರೂ., ಡಿ.ಎಂ.ಎಫ್. ನಿಧಿಯಿಂದ 40 ಕೋಟಿ ರೂ., ಇತರೆ ಇಲಾಖೆಗಳಿಂದ 100 ಕೋಟಿ ರೂ. ಹೀಗೆ ಒಟ್ಟಾರೆ 200 ಕೋಟಿ ರೂ. ಮೊತ್ತದ ಧೀರ್ಘ ಕಾಲ ಉಪಯೋಗಕ್ಕೆ ಬರುವ ಯೋಜನೆಗಳ ಕ್ರಿಯಾ ಯೋಜನೆ ರೂಪಿಸಿದ್ದೇನೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ಅವರು ಕ್ಷೇತ್ರಕ್ಕೆ ಹಾಕಿಕೊಂಡಿರುವ ಮುಂದಿನ ಯೋಜನೆಗಳನ್ನು ವಿವರಿಸಿದರು.