ಬೆಂಗಳೂರು: ಡಿ.ಜೆ.ಹಳ್ಳಿ, ಕಾವಲಭೈರಸಂದ್ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಇಂದು ಸಭೆ ನಡೆಸಿದರು.
ಈ ವೇಳೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚ ನಡೆದಿದದ್ದು,ಸಭೆಯ ಕುರಿತು ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ,
ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಸಂಭವಿಸಿದ ಗಲಭೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳಿಗೆ ಉಂಟಾಗಿರುವ ಹಾನಿಯನ್ನು ಗಲಭೆ ಕೋರರಿಂದ ವಸೂಲು ಮಾಡುವ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಈಗಾಗಲೇ ನೀಡಲಾಗಿರುವ ದೇಶದ ಉಚ್ಛ ನ್ಯಾಯಾಲಯದ ಆದೇಶದಂತೆ ಕ್ಲೇಮ್ ಕಮಿಷನರ್ ನೇಮಿಸಲು ಕೋರುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಈ ಗಲಭೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ವಿವರಿಸಿದರು. ಅಲ್ಲದೇ ಈ ಪ್ರಕರಣಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ(UAPA)ಯನ್ನು ಸಹ ಅಳವಡಿಸಿರುವುದರ ಬಗ್ಗೆ ತಿಳಿಸಲಾಯಿತು.
ಈ ತನಿಖೆಗಳನ್ನು ತ್ವರಿತವಾಗಿ ಕೈಗೊಳ್ಳಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು,ಈಗಾಗಲೇ ದಾಖಲಾಗಿರುವ ಅಪರಾಧ ಪ್ರಕರಣಗಳ ತ್ವರಿತ ಹಾಗೂ ಪರಿಣಾಮಕಾರಿ ವಿಚಾರಣೆಗೆ ಅನುವಾಗುವಂತೆ ಮೂರು ಸದಸ್ಯರನ್ನು ಒಳಗೊಂಡ ವಿಶೇಷ ಅಭಿಯೋಜಕರ ತಂಡವನ್ನು ರಚಿಸಲಾಗಿದೆ.ಈ ಅಪರಾಧ ಪ್ರಕರಣಗಳಲ್ಲಿ ಬಂಧಿತ ಅಪರಾಧಿಗಳಿಗೆ ಸಂಬಂಧಪಟ್ಟಂತೆ ಅವಶ್ಯ ಕಂಡವರನ್ನು ಗುಂಡಾ ಕಾಯಿದೆಯಡಿಯಲ್ಲಿ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿ-ಐಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಉಪಸ್ಥಿತರಿದ್ದರು.