ದೊಡ್ಡಬಳ್ಳಾಪುರ: ಕರೊನಾ ಸೋಂಕಿತರೆಂದರೆ ಮಾರುದ್ದ ಓಡುವ ಜನಗಳ ನಡುವೆ ಇಲ್ಲೊಬ್ಬ ಯೋಗ ಶಿಕ್ಷಕ,ಕರೊನಾ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸ್ಥಳಕ್ಕೆ ತೆರಳಿ ಸೋಂಕಿತರಿಗೆ ಯೋಗಾಭ್ಯಾಸ ಹೇಳಿ ಕೊಡುವ ಮೂಲಕ ತಾಲೂಕಿನ ಜನರಿಗೆ ತನ್ನದೆ ಆದ ಸೇವೆ ಸಲ್ಲಿಸುತ್ತಿದ್ದಾರೆ.
ಸಂಜಯ ನಗರದ ಮೋಕ್ಷ ಯೋಗಾ ಮಂದಿರದ ಕೆ.ಬಾಲಕೃಷ್ಣ ಈ ಸಾಹಸ ಕಾರ್ಯವನ್ನು ಮಾಡುತ್ತಿರುವ ಯೋಗಾ ಶಿಕ್ಷಕ.ನಗರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಕಳೆದ 15 ದಿನಗಳಿಂದ ಸೊಂಕಿತರಿಗೆ ಯೋಗಾಭ್ಯಾಸ ಹೇಳಿ ಕೊಡುತ್ತಿದ್ದಾರೆ.
ಪಿಪಿಇ ಕಿಟ್ ಧರಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿರುವ ಬಾಲಕೃಷ್ಣ. ಬೆಳಗ್ಗೆ 10.30 ರಿಂದ 12.30ರ ವರೆಗೆ
ಚಿಕಿತ್ಸಾ ಕೇಂದ್ರದಲ್ಲಿನ ಆರು ಕೊಠಡಿಗಳಿಗೆ ತಲಾ ಇಪ್ಪತ್ತು ನಿಮಿಷದಂತೆ ಶೀತಲಿಕರಣ ವ್ಯಾಯಾಮ, ಓಂ ಧ್ಯಾನ, ಉಸಿರಾಟದ ವ್ಯಾಯಮವನ್ನು ಹೇಳಿ ಕೊಡುತ್ತಿದ್ದಾರೆ.
ಪ್ರಸ್ತುತ ನಗರದಲ್ಲಿನ ಚಿಕಿತ್ಸಾ ಕೇಂದ್ರದಲ್ಲಿ ಯೋಗಾಭ್ಯಾಸ ಹೇಳಿ ಕೊಡುತ್ತಿರುವ ಬಾಲಕೃಷ್ಣರಿಗೆ,ತಾಲೂಕಿನ ಇತರೆ ಕೇಂದ್ರಗಳಿಗೆ ತೆರಳಿ ಯೋಗಾಭ್ಯಾಸ ಹೇಳಿ ಕೊಡಬೇಕೆಂದು ಅದಿಕಾರಿಗಳಿಂದ ಮನವಿ ಬಂದಿದ್ದು,ಮುಂದಿನ ದಿನಗಳಲ್ಲಿ ಇಸ್ತೂರು,ಗೊಲ್ಲಹಳ್ಳಿ ಕೋವಿಡ್ ಕೇರ್ ಗಳಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ
ಕರೊನಾ ಸಂದರ್ಭದಲ್ಲಿ ಸೋಂಕಿತರಿಗೆ ನೆರವಾಗಬೇಕು
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಯೋಗ ಶಿಕ್ಷಕ ಕೆ.ಬಾಲಕೃಷ್ಣ ಯೋಗಾ ಶಿಕ್ಷಕನಾಗಿ ಕರೊನಾ ಸಂದರ್ಭದಲ್ಲಿ ಸೋಂಕಿತರಿಗೆ ನೆರವಾಗಬೇಕೆಂಬುದು ನನ್ನ ಕರ್ತವ್ಯ.ಈ ಕುರಿತು ಡಾ.ಪರಮೇಶ್ವರ್ ಅವರನ್ನು ಸಂಪರ್ಕಿಸಿದಾಗ ಮುಂಜಾಗ್ರತೆಯ ವಹಿಸಿ ಯೋಗಾ ಹೇಳಿಕೊಡಲು ಅವಕಾಶ ಮಾಡಿಕೊಟ್ಟಿದ್ದು,ಸಾಧ್ಯವಾದಷ್ಟು ಸೇವೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.