ದೊಡ್ಡಬಳ್ಳಾಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲ್ಲೂಕುಗಳಲ್ಲಿ ವಾಸವಾಗಿರುವ ವಿಕಲಚೇತನರು, ಅಂಗವಿಕಲತೆಗೆ ತಕ್ಕ ಅಗತ್ಯ ಗಾಲಿ ಕುರ್ಚಿ, ತ್ರಿಚಕ್ರ ವಾಹನ, ಕ್ರಚರ್ಸ್, ಕೋಲೇಟರ್, ಕೃತಕ ಅಂಗಾಂಗಗಳು, ಬ್ರೈಲ್ ವಾಚ್, ಅಂಧರ ಊರುಗೋಲು, ಶ್ರವಣ ಸಾಧನ, ನೀರಿನ ಹಾಸಿಗೆ, ಪೋರ್ಟೆಬಲ್ ಕಮೋಡ್ ಇತ್ಯಾದಿ ಸಾಧನ ಸಲಕರಣೆಗಳನ್ನು ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು, ತಮ್ಮ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ., ತಾಲ್ಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ. ಹಾಗೂ ಜಿಲ್ಲಾ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ಪಡೆದು ಸಲ್ಲಿಸಬಹುದಾಗಿದೆ.
ಅಂಗವಿಕಲ ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿ 10 ವರ್ಷಗಳಿಂದ ವಾಸವಾಗಿರುವ ಬಗ್ಗೆ ತಹಸೀಲ್ದಾರ್ ರವರಿಂದ ಪಡೆದ ದೃಢೀಕರಣ ಅಥವಾ ಕರ್ನಾಟಕದಲ್ಲಿ 10 ವರ್ಷಗಳಿಂದ ವ್ಯಾಸಂಗ ಮಾಡಿದ ವಿದ್ಯಾಭ್ಯಾಸದ ದೃಢೀಕರಣ ಪತ್ರ ಒದಗಿಸಬೇಕು, ಅಂಗವಿಕಲತೆ ಹೊಂದಿರುವ ಬಗ್ಗೆ ಸಂಬಂಧ ಪಟ್ಟ ವೈದ್ಯಕೀಯ ಪ್ರಾಧಿಕಾರದಿಂದ ಪಡೆದ ಅಂಗವಿಕಲರ ಗುರುತಿನ ಚೀಟಿ/ಯು.ಡಿ.ಐ.ಡಿ. ಕಾರ್ಡ್ ಜೆರಾಕ್ಸ್ ಪ್ರತಿ, ವಿಕಲಚೇತನ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ನಗರ ವಾಸಿಯಾಗಿದ್ದಲ್ಲಿ ರೂ. 24000/- ಮತ್ತು ಗ್ರಾಮೀಣ ವಾಸಿಯಾಗಿದ್ದಲ್ಲಿ ರೂ. 11,500/- ಮೀರಿರಬಾರದು. ಈ ಹಿಂದೆ ಸರ್ಕಾರದ ವತಿಯಿಂದಾಗಲಿ ಅಥವಾ ಸಂಘ ಸಂಸ್ಥೆಗಳಿಂದಾಗಲಿ ಸಹಾಯಧನ ಪಡೆದಿರಬಾರದು. ಮತ್ತು ಸಂಘ ಸಂಸ್ಥೆಗಳಿಂದ ಸಾಧನ ಸಲಕರಣೆ ಪಡೆದಿರಬಾರದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ನಕಲು ಪ್ರತಿ ಒದಗಿಸಬೇಕು.
ಹೆಚ್ಚಿನ ಮಾಹಿತಿಗಾಗಿ, ತಮ್ಮ ಗ್ರಾಮ ಪಂಚಾಯತಿಯ ವಿ.ಆರ್.ಡಬ್ಲ್ಯೂ. ಅಥವಾ ತಾಲ್ಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ ಅಥವಾ ವಿಕಲಚೇತನರ ವಿಕಲಚೇತನರ ಸಹಾಯವಾಣಿ ದೂ.ಸಂ.: 080-29787441 ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 03, ನೆಲಮಹಡಿ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.