ದೊಡ್ಡಬಳ್ಳಾಪುರ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಡಿ.ದೇವರಾಜ ಅರಸು ಅವರು ರಾಜ್ಯಕ್ಕೆ ಹಾಗೂ ಹಿಂದುಳಿದ ವರ್ಗದವರ ಏಳಿಗೆಗೆ ನೀಡಿರುವ ಕೊಡುಗೆ ಅನನ್ಯ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ ಅರಸು ಅವರು ಕರ್ನಾಟಕದ ಏಳಿಗೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ, ಜೀತಪದ್ದತಿ ನಿರ್ಮೂಲನೆ, ಉಳುವವನೇ ಭೂಮಿಗೆ ಒಡೆಯ ಸೇರದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಅಭಿವೃದ್ದಿಗೆ ಶ್ರಮಿಸಿದರು.
ಅಂತೆಯೇ ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುವಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಯವರ ಪಾತ್ರ ಮಹತ್ವದ್ದಾಗಿದೆ ಕಿರಿಯ ವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 20 ಅಂಶಗಳ ಕಾರ್ಯಕ್ರಮ, ಮತದಾನದ ಹಕ್ಕು 18 ವರ್ಷಕ್ಕೆ ಇಳಿಕೆ,ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಮೊದಲಾದ ಕಾರ್‍ಯಗಳು ಇಂದಿಗೂ ಅವಿಸ್ಮರಣೀಯವಾಗಿದ್ದು, ರಾಜೀವ್ ಗಾಂಧಿ ಯವರ ದೂರದೃಷ್ಟಿ ಚಿಂತನೆ ಅಳವಡಿಸಿಕೊಂಡರೆ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುವಲ್ಲಿ ಸಂಶಯವಿಲ್ಲ ಎಂದು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತರಾಮ, ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಪ್ರಭಾವತಿ, ನಗರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಎನ್.ಆಂಜನಮೂರ್ತಿ ಎಸ್ಸಿ ಘಟಕದ ಅಧ್ಯಕ್ಷ ಮುನಿರಾಜ, ಮುಖಂಡರಾದ ಅಪ್ಪಿ ವೆಂಕಟೇಶ್ ಮತ್ತಿತರರಿದ್ದರು.