ದೊಡ್ಡಬಳ್ಳಾಪುರ: ಇಡೀ ದೇಶದಲ್ಲೇ ಮೊದಲ ಬಾರಿಗೆ ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಎತ್ತಿ ಹಿಡಿದ ಅಪರೂಪದ ಸಮಾಜವಾದಿ ವ್ಯಕ್ತಿತ್ವ ದೇವರಾಜ ಅರಸು ಎಂದು ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಹೇಳಿದರು.
ಇಲ್ಲಿನ ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಗುರುವಾರ ಕರೊನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಿಂದುಳಿದ, ದಲಿತ ಮತ್ತು ಅಲ್ಪ ಸಂಖ್ಯಾತರ ಪರ ಕಾಯಿದೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಹೊರತುಪಡಿಸಿದರೆ ದೇವರಾಜ ಅರಸ್ ಪ್ರಮುಖರು.ವಿನೋಬಾ ಅವರ ಭೂದಾನ ಚಳವಳಿ ನಂತರ ದೇಶದಲ್ಲಿ ಬಡವರ ಕಲ್ಯಾಣಕ್ಕೆ ಇಷ್ಟು ದೊಡ್ಡ ಪ್ರಯತ್ನ ನಡೆದದ್ದು ಅರಸು ಮೂಲಕವೇ ಎಂದರು.
ಭೂ ಸುಧಾರಣೆ ಕಾಯ್ದೆಯ ಮೂಲಕ ಉಳುವವನೇ ಹೊಲದೊಡೆಯ ಎಂಬ ಮಹತ್ವದ ಘೋಷಣೆ ಮಾಡಿ ದೇಶದಲ್ಲೇ ಮೊದಲಿಗರೆನಿಸಿದರು.ಇದು ಕೇಂದ್ರ ಸರ್ಕಾರದ ಮೇಲೂ ಪರಿಣಾಮ ಬೀರಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭೂ ಸುಧಾರಣಾ ಕಾಯ್ದೆಯನ್ನು ದೇಶಾದ್ಯಂತ ಜಾರಿಗೆ ತಂದಿದ್ದು ಇತಿಹಾಸ. ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ನಾಮಕರಣ ಮಾಡುವ ಮೂಲಕ ಪ್ರಾದೇಶಿಕ ನ್ಯಾಯ ಒದಗಿಸಿದರು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಡಾ.ಎಂ.ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಸಾಂವಿಧಾನಿಕ ಅವಕಾಶಗಳನ್ನು ಪ್ರಜ್ಞಾಪೂರ್ವಕವಾಗಿ ನೀಡುವ ಕೆಲಸವನ್ನು ಅವರು ಮಾಡಿದರು. ರಾಜ್ಯದಲ್ಲಿ ಎಲ್ಲ ಜನರ ಪರ ದನಿಯಾಗಿದ್ದ ಕೆಲವೇ ಮುಖ್ಯಮಂತ್ರಿಗಳಲ್ಲಿ ಅರಸ್ ಪ್ರಮುಖರು ಎಂದರು.
ವಾಣಿಜ್ಯ ವಿಭಾಗ ಮುಖ್ಯಸ್ಥೆ ಪಿ.ಚೈತ್ರ, ಸಹಾಯಕ ಪ್ರಾಧ್ಯಾಪಕರಾದ ಕೆ.ದಕ್ಷಿಣಾಮೂರ್ತಿ, ಆರ್.ಉಮೇಶ್, ಸಿ.ಪಿ.ಪ್ರಕಾಶ್, ಎನ್.ದಿವ್ಯ, ಎನ್.ಶೃತಿ, ನವಾಜ್ ಷರೀಫ್, ವಿ.ಸ್ವಾತಿ, ವಿಜ್ಞಾನ ವಿಭಾಗದ ನಿಷತ್ ಸುಲ್ತಾನಾ, ಎಚ್.ಆರ್.ಭವ್ಯ, ಎಂ.ಗಿರೀಶ್, ಗ್ರಂಥಪಾಲಕಿ ಎಚ್.ಕೆ.ಪ್ರೇಮ, ಸಿಬ್ಬಂದಿಗಳಾದ ಶ್ರೀನಿವಾಸ್, ರೇಣುಕಮ್ಮ, ರಮೇಶ್, ನಾರಾಯಣಸ್ವಾಮಿ ಮತ್ತಿತರರು ಪಾಲ್ಗೊಂಡರು.