ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಗೊಂದಲಕ್ಕೆ ಕಾರಣವಾದ ಕರೊನಾ ಸೋಂಕಿನ ಕುರಿತಾದ ಬುಲೆಟಿನ್ ವರದಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ಕಾಳಜಿಯಿಂದ ಸರಿ ದಾರಿಗೆ ಮರಳುವ ಲಕ್ಷಣಗಳು ಕಂಡುಬಂದಿದೆ.
ಜಿಲ್ಲಾಧಿಕಾರಿ ರವೀಂದ್ರ ಅವರ ಅನಾರೋಗ್ಯದ ಕಾರಣ ಚಿಕಿತ್ಸೆಗೆ ತೆರಳಿದ ನಂತರ. ಕರೊನಾ ಸೋಂಕಿನ ಕುರಿತಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವರದಿಯಲ್ಲಿ ತೀವ್ರ ಗೊಂದಲ ಆರಂಭವಾಗಿತ್ತು.
ವರದಿ ಗೊಂದಲದ ಕಾರಣ ದೊಡ್ಡಬಳ್ಳಾಪುರದಲ್ಲಿ ಉಂಟಾದ ಆಕ್ರೋಶದ ಹಿನ್ನೆಲೆ ಶಾಸಕ ಟಿ.ವೆಂಕಟರಮಣಯ್ಯ ಜಿಲ್ಲಾಡಳಿತದ ವರದಿಗೆ ಪರ್ಯಾಯವಾಗಿ ದೊಡ್ಡಬಳ್ಳಾಪುರ ತಾಲೂಕು ವರದಿ ನೀಡುವಂತೆ ತಾಲೂಕು ಆಡಳಿತದ ಅಧಿಕಾರಿಗಳಿಗೆ ಸೂಚಿಸಿದರು.ಇದೇ ಹಾದಿ ತುಳಿದ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ಹಾಗೂ ನೆಲಮಂಗಲ ತಾಲೂಕು ಆಡಳಿತ ಪ್ರತ್ಯೇಕ ಕೋವಿಡ್-19 ಬುಲೆಟಿನ್ ಕುರಿತು ವರದಿ ನೀಡಲು ಆರಂಭಿಸಿದವು.ಆದಾಗ್ಯೂ ಜಿಲ್ಲಾಡಳಿತದ ಬುಲೆಟಿನ್ ವರದಿ ಗೊಂದಲ ಮುಂದುವರೆಯಿತೆ ಹೊರತು ಅಂತ್ಯ ಕಾಣಲಿಲ್ಲ.
ಇದೇ ಬುಲೆಟಿನ್ ಗೊಂದಲ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಸಮ್ಮುಖದಲ್ಲಿ ಚರ್ಚೆಗೀಡಾಗಿ ಶಾಸಕರುಗಳು ತಾಲೂಕು ಬುಲೆಟಿನ್ ಅನಿರ್ವಾರ್ಯತೆ ಇದೆ ಎಂದು ಸ್ಪಷ್ಟಪಡಿಸಿದ್ದರು.
ಚಿಕಿತ್ಸೆ ನಂತರ ಕರ್ತವ್ಯಕ್ಕೆ ಮರಳಿದ್ದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಕಳೆದ ಕೆಲ ದಿನಗಳ ಹಿಂದೆಷ್ಟೆ ಹರಿತಲೇಖನಿ ಜಿಲ್ಲಾ ಬುಲೆಟಿನ್ ಹಾಗೂ ವಾಸ್ತವ ವರದಿ ಗೊಂದಲದ ಕುರಿತು ಗಮನಕ್ಕೆ ತಂದಿತ್ತು.ಆ ವೇಳೆ ಬುಲೆಟಿನ್ ಗೊಂದಲ ನಿವಾರಿಸುವ ಭರವಸೆ ನೀಡಿದ್ದ ಜಿಲ್ಲಾಧಿಕಾರಿಗಳು ಹಂತ ಹಂತವಾಗಿ ಗೊಂದಲ ನಿವಾರಣೆಗೆ ಶ್ರಮಿಸಿದ್ದು,ಬಹಳ ದಿನಗಳ ನಂತರ ಜಿಲ್ಲಾಡಳಿತದ ಬುಲೆಟಿನ್ ವರದಿ ಹಾಗೂ ದೊಡ್ಡಬಳ್ಳಾಪುರ ತಾಲೂಕು ಆಡಳಿತದ ವರದಿ ಸ್ವಲ್ಪ ಗೊಂದಲದ ನಡುವೆಯೂ ಒಂದೇ ರೀತಿಯಲ್ಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕರೊನಾ ಬುಲೆಟಿನ್ ವರದಿಯಲ್ಲಿ (ಆಗಸ್ಟ್ 20 ರಂದು) 53 ಪುರುಷರು ಹಾಗೂ 24 ಮಹಿಳೆಯರು ಸೇರಿದಂತೆ 77 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ 17 ಪುರುಷರು ಮತ್ತು 11 ಮಹಿಳೆಯರು, ಹೊಸಕೋಟೆ ತಾಲ್ಲೂಕಿನಲ್ಲಿ 17 ಪುರುಷರು ಮತ್ತು 5 ಮಹಿಳೆಯರು, ದೇವನಹಳ್ಳಿ ತಾಲ್ಲೂಕಿನಲ್ಲಿ 8 ಪುರುಷರು ಮತ್ತು 1 ಮಹಿಳೆಯರು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 10 ಪುರುಷರು ಮತ್ತು 6 ಮಹಿಳೆಯರು ಹಾಗೂ ಬೆಂಗಳೂರು ನಗರ ಜಿಲ್ಲೆ ಮತ್ತು ಇತರೆ ಜಿಲ್ಲೆಗಳಿಗೆ ಸೇರಿದ 1 ಪುರುಷ ಮತ್ತು 1 ಮಹಿಳೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.