ದೊಡ್ಡಬಳ್ಳಾಪುರ: ಈ ಬಾರಿಯ ಗಣೇಶೋತ್ಸವಕ್ಕೆ ಕರೊನಾ ಕಂಟಕ ಎದುರಾಗಿದ್ದು, ಸಂಭ್ರಮದ ಗಣೇಶ ಚತುರ್ಥಿ ಆಚರಣೆಗೆ ತಡೆಯೊಡ್ಡಿದೆ.
ಕೊವಿಡ್-19 ನಿಂದಾಗಿ ನಗರದ ಜೀವನಾಡಿ ನೇಕಾರಿಕೆ ಸಂಕಷ್ಟದಲ್ಲಿದೆ.ಈ ನಡುವೆ ಆಗಮಿಸಿರುವ ಗಣೇಶ ಚತುರ್ಥಿಗೆ ದಿನಬಳಕೆ ವಸ್ತುಗಳು ಹಾಗೂ ಗಣೇಶ ಮೂರ್ತಿಗಳು ಸಹ ದುಬಾರಿಯಾಗಿದ್ದು, ಹಬ್ಬಕ್ಕಾಗಿ ತಾಲೂಕಿನಲ್ಲಿ ಸ್ವಾಗತ ನಡೆದಿದೆ.
ಗಣೇಶ ಮೂರ್ತಿ ದುಬಾರಿ:
ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಕೂಡಿಸುವಂತೆ ಕಟ್ಟುನಿಟ್ಟಿನ ಆದೇಶವಿರುವುದರಿಂದ ಪಾರಂಪರಿಕ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಚಿಕ್ಕ ಗಣಪತಿಗಳಿಗೆ ಬೇಡಿಕೆ:
ಇಂದು ಗಣೇಶ ಮೂರ್ತಿ ತಯಾರಿಕೆಗೆ, ಜೇಡಿಮಣ್ಣು, ಬಣ್ಣಗಳ ಬೆಲೆ, ಕೂಲಿ, ಸಾಗಾಣಿಕೆ ಸೇರಿ ಬೆಲೆ ಏರಿಕೆಗಳಿಂದಾಗಿ ಮೂರ್ತಿಗಳ ಬೆಲೆ ಅನಿವಾರ್‍ಯ ಹೆಚ್ಚಳ ಮಾಡಬೇಕಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಇಲ್ಲ. ಸಾರ್ವಜನಿಕ ಗಣೇಶೋತ್ಸವಕ್ಕೆ 4 ಅಡಿ ಮಿತಿ ಹಾಗೂ ಹಲವಾರು ನಿಯಮಗಳನ್ನು ಹೇರಿರುವುದರಿಂದ, ಮನೆಗಳಲ್ಲಿ ಕೂಡಿಸಲು ಸಣ್ಣ ಮೂರ್ತಿಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಗಣೇಶ ಮೂರ್ತಿಗಳ ಮಾರಾಟಗಾರರು.
ತಾಲೂಕಿನಲ್ಲಿ ಹೂವಿನ ಇಳುವರಿ ಕಡಿಮೆಯಾಗಿದೆ. ಆದರೆ ಕಳೆದ ವಾರದಿಂದ ಬೀಳುತ್ತಿರುವ ಜಡಿ ಮಳೆಯಿಂದಾಗಿ ಹೂವುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ವರಲಕ್ಷ್ಮೀ ಹಬ್ಬದಂತೆಯೇ ಈ ಬಾರಿ ಹೂವಿಗೆ ಸಹ ಬೇಡಿಕೆ ಹೆಚ್ಚಾಗಿ ಹಬ್ಬಕ್ಕಾಗಿ ಹೂಗಳ ಬೆಲೆಗಳು ಏರಿಕೆಯಾಗಿವೆ.
ಗಣೇಶನ ಉತ್ಸವ ಮೂರ್ತಿ, ಮಾವಿನಸೊಪ್ಪು, ಬಾಳೆಕಂದು ಮೊದಲಾದ ಸಾಮಗ್ರಿಗಳು ಹೆಚ್ಚಾಗಿವೆ. ಹೂವು, ಹಣ್ಣು ಬೆಲೆಗಳು ಹಬ್ಬದ ಏರಿಕೆ ಬೆಲೆಯಲ್ಲಿವೆ. ಬೆಲೆ ಏರಿಕೆಗಳು ಗಣೇಶ ಹಬ್ಬದ ಉತ್ಸಾಹಕ್ಕೆ ತಣ್ಣೀರೆರಚಿದ್ದರೂ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಆಚರಿಸಲು ಸಕಲ ಸಿದ್ದತೆಗಳು ನಡೆದಿವೆ.