ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿಗೆ ಪ್ರಸ್ತುತ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿ ರೂ. 10.50 ಕೋಟಿಯಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.
ಅವರು ಇಂದು ಮೂಡಿಗೆರೆ ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯಿತಿಯ ವಿವಿಧ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಮಲೆನಾಡು ಭಾಗ ಮೂಡಿಗೆರೆ ಕ್ಷೇತ್ರವು ಅತಿವೃಷ್ಟಿ, ಧರೆಕುಸಿತ ಸೇರಿದಂತೆ ಹಲವು ಸಂಕಷ್ಟಗಳಿಗೆ ಸಿಲುಕಿದ್ದು ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಈ ವೇಳೆ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ತೋರಿದ್ದೇನೆ ಎಂದ ಅವರು ಜಿಲ್ಲೆಗೆ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ರಸ್ತೆ, ಮನೆ ನಿರ್ಮಾಣ, ಸೇತುವೆ ಸೇರಿದಂತೆ ಹಲವು ಕಾಮಗಾರಿಗಳಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ರೂ. 27@ ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಮತ್ತು ಬೆಳೆ ನಷ್ಟ ಪರಿಹಾರಕ್ಕಾಗಿ ರೂ.61 ಕೋಟಿ ಪರಿಹಾರ ಧನ ನೀಡಲಾಗಿದೆ ಎಂದರು.
ಮೂಡಿಗೆರೆ ಒಳಗೊಂಡಂತೆ ಹಲವು ಪ್ರದೇಶಗಳಲ್ಲಿ ಮನೆ ಕುಸಿತ ಉಂಟಾಗಿದ್ದು ಈ ವೇಳೆ ಸಮೀಕ್ಷೆ ನಡೆಸಿ ಶೇ 75 ಕ್ಕಿಂತ ಹೆಚ್ಚು ಹಾನಿಗೊಳಗಾದ ಎ. ಮಾದರಿಯ ಮನೆಗಳಿಗೆ ಪರಿಹಾರವಾಗಿ ರೂ.5 ಲಕ್ಷ, ಶೇ.50 ರಷ್ಟು ಹಾನಿಯಾದ ಬಿ. ಮಾದರಿಯ ಮನೆಗಳಿಗೆ ರೂ. 3 ಲಕ್ಷ, ಭಾಗಶಃ ಹಾನಿಯಾದ ಮನೆಗಳಿಗೆ ರೂ.50 ಸಾವಿರ ಪರಿಹಾರಧನ ವಿತರಿಸಲಾಗಿದೆ ಅಲ್ಲದೇ, ಬೆಳೆ ಹಾನಿಯಾಗಿ ನಷ್ಟವಾಗಿದ್ದಲ್ಲಿ ಎನ್.ಡಿ.ಆರ್.ಎಫ್ ನಿಯಮದನ್ವಯ ಬೆಳೆ ಪರಿಹಾರ ವಿತರಿಸಲಾಗಿದ್ದು ಹೆಚ್ಚುವರಿಯಾಗಿ ರಾಜ್ಯಸರ್ಕಾರ 10 ಸಾವಿರ ಬೆಳೆ ನಷ್ಟ ಪರಿಹಾರ ನೀಡಿದೆ ಎಂದರು.
ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಅನುದಾನ ನೀಡಿದ 2ನೇ ತಾಲ್ಲೂಕು ಮೂಡಿಗೆರೆಯಾಗಿದೆ ಅತಿವೃಷ್ಟಿ ಹಾಗೂ ಧರೆಕುಸಿತದಿಂದ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ಸೇರಿದಂತೆ ಇಲ್ಲಿನ ದೇವರ ಮನೆ, ಹೇಮಾವತಿ ಉಗಮ ಸ್ಥಾನ, ಬಲ್ಲಾಳರಾಯನ ದುರ್ಗ, ಆಲ್ದೂರು ಸೇರಿದಂತೆ ವಿವಿದೆಡೆ ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ಹಾಗೂ ನೀರಾವರಿ ಯೋಜನೆಗಳ ಪುನಶ್ಚೇತನಕ್ಕಾಗಿ ರೂ. 10.50 ಕೋಟಿಯಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರದಿಂದ ರೂ.6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ರೂ 4 ಸಾವಿರ ಒಟ್ಟು 10 ಸಾವಿರ ಸಹಾಯಧನವನ್ನು ರೈತರ ಖಾತೆಗಳಿಗೆ ನೇರವಾಗಿ ಹಣ ಬಿಡುಗಡೆಗೊಳಿಸಲಾಗಿದೆ ಅಲ್ಲದೇ ರೈತರೇ ನೇರವಾಗಿ ಬೆಳೆ ಮಾಹಿತಿ ನೀಡಲು ಅನುಕೂಲವಾಗುವಂತೆ ಇದೀಗ ಬೆಳೆ ಸಮೀಕ್ಷೆ ಆಪ್ ಬಿಡುಗಡೆಗೊಳಿಸಲಾಗಿದ್ದು ಇದರಿಂದಾಗಿ ರೈತ ಬೆಳೆದ ಬೆಳೆಯನ್ನು ಸ್ವತಃ ನೇರವಾಗಿ ಮಾಹಿತಿಯನ್ನು ದಾಖಲಿಸಬಹುದಾಗಿದೆ ಇದೊಂದು ರೈತಸ್ನೇಹಿ ವಿಧಾನವಾಗಿದೆ ಎಂದ ಅವರು ರೈತರ ಏಳಿಗೆಗಾಗಿ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಜನಸ್ನೇಹಿಯಾಗಿ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದುವಂತೆ ಸಲಹೆ ನೀಡಿದರು.
ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿನ ಕಾಫಿ, ಮೆಣಸು, ಅಡಿಕೆ, ಏಲಕ್ಕಿ ಸೇರಿದಂತೆ ಹಲವು ಬೆಳೆಗಳ ಬೆಳೆಗಾರರು, ರೈತರ ಸಮಸ್ಯೆಗಳ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಸಲ್ಲಿಸಲಾಯಿತು ಎಂದು ತಿಳಿಸಿದರು.
ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಕೇಂದ್ರ, ಮೂಡಿಗೆರೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆ, ಹೊಯ್ಸಳ ಸರ್ಕ್ಯೂಟ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದರು.
ವಿಧಾನಸಭಾ ಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಮಾತನಾಡಿ ಮೂಡಿಗೆರೆ ತಾಲ್ಲೂಕಿಗೆ ಸ್ವಯಂ ಉದ್ಯೋಗ ಖಾತ್ರಿ ಯೋಜನೆ ಅಡಿ ರೂ.10 ಕೋಟಿ ಬಿಡುಗಡೆಯಾಗಿದ್ದು ಲೋಪದೋಷಗಳಿಲ್ಲದಂತೆ ಅದನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ತಿಳಿಸಿದ ಅವರು ಮೂಡಿಗೆರೆ ತಾಲ್ಲೂಕು ಪಂಚಾಯಿತಿಯು ಉತ್ತಮ ಜನಸ್ನೇಹಿ ಆಡಳಿತ ನೀಡುವ ಮೂಲಕ ರಾಜ್ಯಕ್ಕೆ ಮೊದಲನೇ ಮಾದರಿ ಪಂಚಾಯಿತಿಯಾಗಿದೆ ಎಂದರು.
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ ಕೊರೋನಾದಿಂದಾಗಿ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಅದರ ನಡುವೆಯು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ ಶ್ರಮಿಸಿದೆ ಎಂದರು.
ಮೂಡಿಗೆರೆ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ, ಸೇತುವೆ ನಿರ್ಮಾಣ, ಬೆಳೆ ನಷ್ಟ ಪರಿಹಾರ ಸೇರಿದಂತೆ ವಿವಿಧ ಅಭಿವೃದ್ಧಿ ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಮೂಡಿಗೆರೆ, ಕುದುರೆಮುಖ ಸೇರಿದಂತೆ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಹಾನಿ ಕುರಿತು ಮಾಹಿತಿ ಪಡೆದಿದ್ದಾರೆ ಈ ಸಂಬಂಧ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಮನ್ವಯದೊಂದಿಗೆ ತಾಲ್ಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.