ದೊಡ್ಡಬಳ್ಳಾಪುರ: ವೈನ್ ತಯಾರಿಕೆಗೆ ಬಳಸುವ ದ್ರಾಕ್ಷಿ ಬೆಲೆ ಕೊವಿಡ್-19 ಲಾಕ್‌ಡೌನ್ ಸಮಯದಲ್ಲಿ ಕುಸಿದಿದ್ದು ಈಗ ಚೇತರಿಕೆ ಕಂಡುಕೊಂಡಿದೆ,ರಾಜ್ಯದಲ್ಲಿ ವೈನ್ ತಯಾರಿಕಾ ಘಟಕಗಳಿಗೆ ವಿಶೇಷ ಅನುಮತಿ ನೀಡುವ ಮೂಲಕ ರೈತರ ದ್ರಾಕ್ಷಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದ್ದು, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ವೈನ್ ದ್ರಾಕ್ಷಿ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರಘನಾಥಪುರದ ಗ್ರೋವರ್ ವೈನ್ ಯಾರ್ಡ್ ವೈನ್ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ,ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.ಕರೊನಾ ಲಾಕ್‌ಡೌನ್ ಸಮಯದಲ್ಲಿ ದ್ರಾಕ್ಷಿ ಬೆಲೆ ತೀರಾ ಕುಸಿದಿದ್ದ ಹಿನ್ನಲೆಯಲ್ಲಿ ಅಂತರಾಜ್ಯ ಮಾರಾಟ ಸೇರಿದಂತೆ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ವೈನ್ ತಯಾರಿಕೆಗೆ ತನ್ನದೇ ಆದ ವಿಶಿಷ್ಟ ಪದ್ದತಿಗಳಿದ್ದು, ಹೆಚ್ಚು ಆಲ ಸಂಗ್ರಹಿಸಿಟ್ಟಷ್ಟು ಬೆಲೆ ಹೆಚ್ಚಾಗುತ್ತದೆ.ವೈನ್ ತಯಾರಿಕೆ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಕೊವಿಡ್-19 ಸೋಂಕು ಹರಡುವ ಹಿನ್ನಲೆಯಲ್ಲಿ ವೈನ್ ಹಾಗೂ ಮದ್ಯ ತಯಾರಿಕಾ ಘಟಕಗಳಲ್ಲಿ ಅನುಸರಿಸುತ್ತಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸ್ವಚ್ಛತೆ, ಕಾರ್ಮಿಕರ ಸಾಮಾಜಿಕ ಅಂತರ ಸೇರಿದಂತೆ ಕೊವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.ಅಬಕಾರಿ ಆಯಕ್ತ ಲೋಕೇಶ್ವರ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಹಾಜರಿದ್ದರು.