ದೊಡ್ಡಬಳ್ಳಾಪುರ: ತಾಲೂಕಿನ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ದಿನೇ ದಿನೆ ಕರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ತಾಲೂಕು ಆರೋಗ್ಯ ಇಲಾಖೆ, ತಾಲೂಕು ಆಡಳಿತ ಮತ್ತು ತಾಲುಕು ಪಂಚಾಯಿತಿ ಸಹಯೋಗದೊಂದಿಗೆ ಕೋವಿಡ್-19 ವಿಶೇಷ ತಪಾಸಣೆಗೆ ಚಾಲನೆ ನೀಡಲಾಗಿದೆ.
ಬಾಶೆಟ್ಟಿಹಳ್ಳಿ, ಬ್ಯಾಂಕ್ ಸರ್ಕಲ್, ಮಜರಾಹೊಸಹಳ್ಳಿ ಮತ್ತಿತರ ವ್ಯಾಪ್ತಿಯಲ್ಲಿ ವಾಸವಾಗಿರುವ ಕಾರ್ಮಿಕರ ವಸತಿ ಗೃಹಗಳ ಬಳಿ ತೆರಳುವ ಈ ವಿಶೇಷ ತಪಾಸಣಾ ತಂಡ,ಸ್ಥಳದಲ್ಲಿಯೇ ಪರೀಕ್ಷೆ ನಡೆಸುತ್ತಿದ್ದು ಸೋಂಕಿತರು ಪತ್ತೆಯಾದಲ್ಲಿ ಚಿಕಿತ್ಸೆಗೆ ಕರೆದೊಯ್ಯುತ್ತಿದೆ.
ಈ ವಿಶೇಷ ತಪಾಸಣೆಯನ್ನು ಮಜರಾಹೊಸಹಳ್ಳಿ ವ್ಯಾಪ್ತಿಯಲ್ಲಿ ಬುಧವಾರ ಆರಂಭಿಸಲಾಗಿದ್ದು, ಈ ವ್ಯಾಪ್ತಿಯಲ್ಲಿನ ಸಿಲ್ವರ್ ಪಾರ್ಕ್ ಮಹಿಳಾ ವಸತಿ ಗೃಹದಲ್ಲಿ ವಾಸವಾಗಿದ್ದ ಯುವತಿಯರಲ್ಲಿ ಮೊದಲ ದಿನವೇ 14 ಮಂದಿ ಸೋಂಕು ಪತ್ತೆಯಾಗಿ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ತಾಪಂ ಸಭೆಯಲ್ಲಿ ವಿಶೇಷ ತಪಾಸಣೆಗೆ ಸಲಹೆ
ತಾಪಂ ಅಧ್ಯಕ್ಷೆ ರತ್ನಮ್ಮ ಜಯರಾಂ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸರ್ವ ಸದಸ್ಯರ ಸಭೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿ ವಿಶೇಷ ತಪಾಸಣೆಗೆ ಸೂಚನೆ ಸಹ ಕೇಳಿ ಬಂದಿತ್ತು.
ಈ ತಪಾಸಣೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಮಜರಾಹೊಸಹಳ್ಳಿ,ಬಾಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಪಿಡಿಒ,ಸಿಬ್ವಂದಿ ಹಾಗೂ ಕಂದಾಯ ಸಿಬ್ಬಂದಿಗಳು ಕೈಜೋಡಿಸಿದ್ದಾರೆ.