ದೊಡ್ಡಬಳ್ಳಾಪುರ: ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಮಾಜಿಕ ಸೇವೆಗಳ ಅಗತ್ಯವಿರುವುದನ್ನು ಮನಗಂಡಿರುವ ಲಾರ್ಸನ್ ಅಂಡ್ ಟಾಬ್ರೋ (L&T) ಕಂಪನಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಕಂಪನಿಯ ಸಾಮಾಜಿಕ ಹೊಣೆಗಾರಿಕೆಯಲ್ಲಿ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಲಾರ್ಸನ್ ಅಂಡ್ ಟಾಬ್ರೋ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅರವಿಂದ್ ಕೆ.ಗರ್‍ಗ್ ತಿಳಿಸಿದರು.
ನಗರದ ಎಪಿಎಂಸಿ ಎದುರಿನ ಲಯನ್ಸ್ ಡಯಾಲಿಸಿಸ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಲಾರ್ಸನ್ ಅಂಡ್ ಟಾಬ್ರೋ ಕಂಪನಿ ನಿರ್ಮಿಸಿರುವ ಲಯನ್ಸ್ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗಳಿಸಿದ ಸಂಪತ್ತಿನಲ್ಲಿ ಸಮಾಜ ಸೇವೆಗೆ ಮೀಸಲಿಡುವುದು ಅಗತ್ಯವಾಗಿದ್ದು, ಸೇವೆಯನ್ನು ಪಡೆದುಕೊಂಡವರು ಸಹ ಸಮಾಜಕ್ಕೆ ಋಣಿಯಾಗಿರಬೇಕು.ಲಯನ್ಸ್ ಕ್ಲಬ್ ವತಿಯಿಂದ ನಡೆಯುತ್ತಿರುವ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳು, ಡಯಾಲಿಸಿಸ್ ಸೇವೆಗಳು ಶ್ಲಾಘನೀಯವಾಗಿದ್ದು, ಮುಂದೆಯೂ ಇಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳಲು ನಮ್ಮ ಕಂಪನಿಯ ಸಹಕಾರ ಇದೆ ಎಂದು ತಿಳಿಸಿದರು.
ಲಯನ್ಸ್ ಜಿಲ್ಲಾ ರಾಜ್ಯಪಲ ಎಂ.ಬಿ.ದೀಪಕ್ ಸುಮನ್ ಸಮಾರಂಭ ಉದ್ಘಾಟಿಸಿ,ದೇಶದಲ್ಲಿ ಹಲವಾರು ಕಂಪನಿಗಳಿದ್ದರೂ ಗಮನಾರ್ಹವಾಗಿ ಸೇವೆ ಸಲ್ಲಿಸುವ ಕೆಲವೇ ಕಂಪನಿಗಳಲ್ಲಿ ಲಾರ್ಸನ್ ಅಂಡ್ ಟಾಬ್ರೋ ಒಂದಾಗಿದೆ. ಸೇವಾ ಕಾರ್‍ಯಗಳಲ್ಲಿ ಲಯನ್ಸ್ ಮುಂಚೂಣಿಯಲ್ಲಿದ್ದು,ದೊಡ್ಡಬಳ್ಳಾಪುರದ ಕ್ಲಬ್‌ನ ಕಾರ್ಯಕ್ರಮಗಳು ಅಭಿನಂದನೀಯ ಎಂದರು.
ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ,ಲಯನ್ ಚಾರಿಟೀಸ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಒಂದು ಸಾರಿಯ ಡಯಾಲಿಸಿಸ್‌ಗೆ 1,500 ಖರ್ಚು ಬರುತ್ತಿದ್ದು,ಲಯನ್ಸ್ ಸಂಸ್ಥೆ ಅರ್ಧ ಖರ್ಚು ಭರಿಸುತ್ತಿದೆ. ಈ ದಿಸೆಯಲ್ಲಿ ಬಡವರಿಗೆ ಉಚಿತವಾಗಿ ರಿಯಾಯಿತಿ ಚಿಕಿತ್ಸೆಗೆ ನೆರವಾಗುವ ದೃಷ್ಟಿಯಿಂದ ಒಂದು ಕೋಟಿ ರೂಪಾಯಿಗಳ ನಿಧಿ ಸಂಗ್ರಹ ಮಾಡಿ ಅದರಿಂದ ಬರುವ ಬಡ್ಡಿ ಹಣವನ್ನು ಬಡವರ ಚಿಕಿತ್ಸೆಗೆ ಬಳಸಿಕೊಳ್ಳಲು ಯೋಜನೆ ಹೊಂದಲಾಗಿದೆ.ಈಗಾಗಲೇ ಹಲವಾರು ದಾನಿಗಳು ಹಣ ನೀಡಿದ್ದು,ಇಚ್ಛೆಯುಳ್ಳವರು ಲಯನ್ಸ್ ಸಂಸ್ಥೆಗೆ ದೇಣಿಗೆ ನೀಡಬಹುದಾಗಿದೆ ಎಂದು ಮನವಿ ಮಾಡಿದರು.
ಲಯನ್ಸ್ ಚಾರಿಟೀಸ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲಾರ್ಸನ್ ಅಂಡ್ ಟಾಬ್ರೋ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಡಿ.ಕೇಶವ ಕುಮಾರ್ ಲಯನ್ಸ್ ಜೋನ್ ಚೇರ್ ಪರ್ಸನ್ ಕೆ.ವಿ.ಪ್ರಭುಸ್ವಾಮಿ, ಲಯನ್ಸ್ ಚಾರಿಟೀಸ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕೃಷ್ಣಮೂರ್ತಿ, ಖಜಾಂಚಿ ಎಸ್.ನಟರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಸ್.ಮಂಜುನಾಥ್,ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸ್, ಸಹ ಕಾರ್ಯದರ್ಶಿ ಮಂಗಳ ಗೌರಿ ಪರ್ವತಯ್ಯ ಲಯನ್ಸ್ ಪದಾಧಿಕಾರಿಗಳು ಹಾಜರಿದ್ದರು.