ದೊಡ್ಡಬಳ್ಳಾಪುರ: ಕೃಷಿ ಉತ್ಪಾದನೆಯಲ್ಲಿ ನಮ್ಮದು ರಫ್ತು ಆಧಾರಿತ ರಾಜ್ಯವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಕರ್ನಾಟಕದಿಂದ ರಫ್ತು ಮಾಡಿದ್ದಷ್ಟು ಹಣ್ಣು, ತರಕಾರಿ ದೇಶದ ಬೇರೆ ಯಾವ ರಾಜ್ಯದಲ್ಲು ನಡೆದಿಲ್ಲ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ ಹೇಳಿದರು.
ಅವರು ತಾಲ್ಲೂಕಿನ ಅಪ್ಪಕಾರನಹಳ್ಳಿ ಗ್ರಾಮದ ರೈತ ಗಂಗಬೈರಪ್ಪ ಅವರು ನೀಲಗಿರಿ ತೆರವುಗೊಳಿಸಿ ಅರಣ್ಯ ಆಧಾರಿತ ಕೃಷಿ ಆರಂಭದ ಭಾಗವಾಗಿ ಶುಕ್ರವಾರ ಹಲಸಿನ ಸಸಿ ನೆಟ್ಟು ಮಾತನಾಡಿದರು.
ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಅಂತರ್ಜಲ ಗಣನೀಯವಾಗಿ ಕುಸಿತವಾಗಲು ಹಾಗೂ ಮಣ್ಣಿನ ಫಲವತ್ತತೆ ಹಾಳಾಗಲು ನೀಲಗಿರಿ ಮರ ಮುಖ್ಯ ಕಾರಣವಾಗಿದೆ. ಈ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಆರಂಭಿಸಲಾದ ನೀಲಗಿರಿ ಮರಗಳ ತೆರವು ಆಂದೋಲನದ ಉದ್ದೇಶ ರೈತರಿಗೆ ಮನವರಿಕೆಯಾಗಿದೆ. ನೀಲಗಿರಿ ಬೆಳೆಯಿಂದ ಒಬ್ಬ ರೈತ ಹಣ ಗಳಿಸಬಹುದು. ಆದರೆ ಅಕ್ಕಪಕ್ಕದ ಇತರೆ ರೈತರ ಭೂಮಿಯಲ್ಲಿ ಯಾವುದೇ ರೀತಿಯ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದರು.
ನೀಲಗಿರಿ ಮರಗಳನ್ನು ಬೆಳೆಸಿ ಆದಾಯಗಳಿಸುವುದಕ್ಕಿಂತಲು ಹೆಚ್ಚಿನ ಆದಾಯ ಹಾಗೂ ಪರಿಸರ, ಪ್ರಾಣಿ, ಪಕ್ಷಿಗಳಿಗು ಅನುಕೂಲವಾಗುವಂತೆ ಅರಣ್ಯ ಆಧಾರೀತ ಕೃಷಿಯಿಂದ ಪಡೆಯಲು ಸಾಕಷ್ಟು ಅವಕಾಶಗಳಿವೆ. ಹಣ್ಣಿನ ಗಿಡಗಳನ್ನು ಬೆಳೆಸಲು ಕೊಳವೆಬಾವಿ ನೀರಿನ ಆಶ್ರಯ ಅಗತ್ಯ ಎನ್ನುವ ಕಲ್ಪನೆ ತಪ್ಪು. ಕೊಳವೆಬಾವಿ ಇಲ್ಲದೆಯು ಟ್ಯಾಂಕರ್ಗಳ ಮೂಲಕ ಕಡಿಮೆ ಪ್ರಮಾಣದ ನೀರು ಬಳಸಿಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಲು ಸಾಕಷ್ಟು ಉಪಾಯಗಳನ್ನು ರೈತರು ಇಂದು ಕಂಡುಕೊಂಡಿದ್ದಾರೆ. ಸಸಿಗಳನ್ನು ನೆಟ್ಟ ಒಂದೆರಡು ವರ್ಷಗಳ ಕಾಲ ಬೇಸಿಗೆಯಲ್ಲಿ ಮಾತ್ರ ನೀರು ಅಗತ್ಯ. ಇತರೆ ದಿನಗಳಲ್ಲಿ ಮಳೆ ನೀರಿನಲ್ಲೇ ಅರಣ್ಯ ಆಧಾರಿತ ಕೃಷಿ ಸಾಧ್ಯವಾಗಲಿದೆ ಎಂದರು.
ಬಯಲು ಸೀಮೆ ಜಿಲ್ಲೆಗಳಲ್ಲಿ ಅಂತರ್ಜಲದ ಮೇಲಿನ ಅವಲಂಭನೆ ಹೆಚ್ಚಾಗುತ್ತಿದೆ. ಹೀಗಾಗಿ ಕೃಷಿಗೆ ನೀರಿನ ಕೊರತೆ ಮತ್ತಷ್ಟು ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಕೃಷಿಯನ್ನು ನಂಬಿ ಜೀವನ ನಡೆಸಲು ಅರಣ್ಯ ಆಧಾರಿತ ಕೃಷಿ ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಮುತ್ತೇಗೌಡ, ಕೆ.ಸುಲೋಚನಮ್ಮ ವೆಂಕಟರೆಡ್ಡಿ, ವಡ್ಡರಹಳ್ಳಿರವಿ, ಆರ್.ಕೆಂಪರಾಜ್, ಶಿವಕುಮಾರ್, ಹಸನ್ ಘಟ್ಟ ಚಂದ್ರಶೇಖರ್, ವೆಂಕಟಾಚಲಪತಿ,ನಾಗಸಂದ್ರ ನಟರಾಜ್,ಗಂಗಾಧರ್,ಡಿ.ಶ್ರೀಕಾಂತ್ ಇದ್ದರು.