ದೊಡ್ಡಬಳ್ಳಾಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಸಂಸ್ಥೆಗೆ ರಾಜ್ಯ ಪ್ರಶಸ್ತಿ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲ್ಲೂಕುಗಳಲ್ಲಿ ವಾಸವಾಗಿರುವ ಅರ್ಹ ಹಿರಿಯ ನಾಗರಿಕರು ಅಥವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು, ಅರ್ಜಿ ನಮೂನೆಗಳನ್ನು ತಮ್ಮ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ., ತಾಲ್ಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ. ಹಾಗೂ ಜಿಲ್ಲಾ ಕಚೇರಿಯಲ್ಲಿ ಪಡೆಯಬಹುದಾಗಿದೆ.
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅಕ್ಟೋಬರ್ 01 ರಂದು ರಾಜ್ಯ ಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲಾ ಕ್ಷೇತ, ಕಾನೂನು, ಪ್ರತಿಭೆ, ಕ್ರೀಡೆ, ಸಮಾಜ ಸೇವೆ) ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ 06 ವೈಯಕ್ತಿಕ ಪ್ರಶಸ್ತಿಗಳನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಸಂಸ್ಥೆಗೆ ಪ್ರಶಸ್ತಿ ಸೇರಿ ಒಟ್ಟು 07 ಪ್ರಶಸ್ತಿಗಳನ್ನು ನೀಡಲಾಗುವುದು ಈ ಯಾವುದಾದರೊಂದು ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಹಿರಿಯ ನಾಗರಿಕರು ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಯವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು (ವೈಯಕ್ತಿಕ ವಿಭಾಗ), ಅರ್ಜಿದಾರರ/ವ್ಯಕ್ತಿಗಳ/ ಸಂಸ್ಥೆಗಳ ಸ್ವವಿವರ ಹಾಗೂ ಸಾಧನೆಗಳ ಸಾರಾಂಶ, ಪೂರಕ ದಾಖಲೆಗಳೊಂದಿಗೆ, ಡ್ರಾಫ್ಟ್ ಸೈಟೇಷನ್ (1 ಪುಟಕ್ಕೆ ಮೀರದಂತೆ) ದಾಖಲೆಗಳನ್ನು ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯತಿಯ ವಿ.ಆರ್.ಡಬ್ಲ್ಯೂ./ ತಾಲ್ಲೂಕು ಪಂಚಾಯತಿಯ ಎಂ.ಆರ್.ಡಬ್ಲ್ಯೂ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ: 03, ನೆಲಮಹಡಿ ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ವಿಕಲಚೇತನರ ಸಹಾಯವಾಣಿ: 080-29787441 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.