ದೊಡ್ಡಬಳ್ಳಾಪುರ; ಕೊವಿಡ್-19 ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪದವಿ ತರಗತಿಗಳನ್ನು ನಿಯಮಾನುಸಾರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಕೊವಿಡ್-19 ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಯ್ಯ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ತರಗತಿಗಳ ಆರಂಭದ ಅಂಗವಾಗಿ ಸಾಮಾಜಿಕ ಜಾಗೃತಿ ಮತ್ತು ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.ಕೊವಿಡ್-19 ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಕಾಲೇಜಿನ ಕೊಠಡಿಗಳನ್ನು ಸ್ನಾನಿಟೈಸರ್ ಮಾಡಲಾಗಿದೆ. ಕಾಲೇಜಿನ ಹಳೆಯ ವಿದ್ಯಾರ್ಥಿ ಮಂಜೇಶ್ ವಿದ್ಯಾರ್ಥಿಗಳಿಗೆ 600 ಮಾಸ್ಕ್‌ಗಳನ್ನು ಹಾಗೂ ಸ್ಯಾನಿಟೈಸರ್ ನೀಡಿದ್ದಾರೆ. ವ್ಯಕ್ತಿಗತ ಅಂತರಕ್ಕೆ ಒತ್ತು ನೀಡಲಾಗುತ್ತಿದೆ. 1ನೇ, 2ನೇ ಹಾಗೂ 5ನೇ ಸೆಮಿಸ್ಟರ್‌ಗಳು ಆನ್‌ಲೈನ್ ತರಗತಿಗಳು ಆರಂಭವಾಗಿವೆ. ಸೆ.14 ಅಂತಿಮ ಪದವಿ ತರಗತಿಗಳ ಪರೀಕ್ಷೆ ನಡೆಯುವುದರಿಂದ ಈ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪುನರಾವರ್ತಿತ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಗ್ರೂಪ್ ಮಾಡಿ, ಪ್ರತಿ ವಿಚಾರಗಳನ್ನು ತಿಳಿಸಲಾಗುತ್ತದೆ.ಆನ್‌ಲೈನ್ ಕ್ಲಾಸ್‌ಗಳನ್ನು ವಿದ್ಯಾರ್ಥಿಗಳು ನಿರ್ಲಕ್ಷಿಸಬಾರದು ಎಂದರು.
ಇದೇ ವೇಳೆ ಕಾಲೇಜಿನ ಪ್ರಾಧ್ಯಾಪಕರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ನೀಡಲಾಯಿತು.