ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತವಾಗುವ ಸ್ಥಳಗಳನ್ನು ಗುರುತಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ” ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಉಳಿದ ಆಂತರಿಕ ರಸ್ತೆಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುತ್ತಿರುವ ಸ್ಥಳಗಳಲ್ಲಿ ಅಪಘಾತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂದರಲ್ಲದೆ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ತಿಳಿಸಿದರು.
ಲೋಕೋಪಯೋಗಿ ಇಲಾಖೆ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ದಿ ನಿಗಮ ಹಾಗೂ ಇತರೆ ರಸ್ತೆ ನಿರ್ಮಾಣ ಜವಾಬ್ದಾರಿ ಹೊಂದಿರುವ ಇಲಾಖೆಗಳ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ಕ್ರಮಕ್ಕಾಗಿ ಪ್ರತ್ಯೇಕ ಅನುದಾನ ಲಭ್ಯವಿದೆ ಎಂದರಲ್ಲದೆ, ಇದರ ಸದ್ಭಳಕೆಗಾಗಿ ಹಾಗೂ ಹೆಚ್ಚುವರಿ ಅನುದಾನಕ್ಕೆ ಸಂಬಂಧಪಟ್ಟಂತೆ ಹೆಚ್ಚು ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ, ಕ್ರಿಯಾಯೋಜನೆ ರೂಪಿಸಿ ರಸ್ತೆ ಸುರಕ್ಷತಾ ಸಮಿತಿಯಿಂದ ಅನುಮೋದನೆ ಪಡೆದು, ಸಂಬಂಧಿಸಿದ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.
ಟೋಲ್‌ಗಳಲ್ಲಿ ಆ್ಯಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳು ಚಲಿಸಲು ಪ್ರತ್ಯೇಕ ಲೈನ್ ಕಲ್ಪಿಸುವಂತೆ ತಿಳಿಸಿದರಲ್ಲದೆ, ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಿ ಎಂದರು.
ನೆಲಮಂಗಲ ವಿಭಾಗದ ಸಾರಿಗೆ ಅಧಿಕಾರಿ ಮಾತನಾಡಿ, ನೆಲಮಂಗಲ ವ್ಯಾಪ್ತಿಯಲ್ಲಿ 14 ಬ್ಲ್ಯಾಕ್ ಸ್ಪಾಟ್(ಹೆಚ್ಚು ಅಪಘಾತವಾಗುವ ಸ್ಥಳ)ಗಳನ್ನು ಗುರುತಿಸಿದ್ದು, ನೆಲಮಂಗಲ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ 78 ಅಪಘಾತ ಪ್ರಕರಣಗಳು ಸಂಭವಿಸಿದ್ದು, 271 ಮಂದಿ ಗಾಯಗೊಂಡಿದ್ದು, 89 ಮಂದಿ ಮೃತರಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಜಗದೀಶ್.ಕೆ.ನಾಯಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಗುರುಮೂರ್ತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.