ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ವಿವಿಧ ಹುದ್ದೆಗಳ ನಾಮಕಾತಿಗೆ ಏಕ ರೂಪದ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಹಣ ಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿಕೆಯನ್ನು ಖಂಡಿಸಿ ಗುರುವಾರ ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಮುನೇಗೌಡ, ಪ್ರಾದೇಶಿಕವಾದ ಭಾಷೆಗಳಲ್ಲಿ ಓದಿರುವವರು ಹಿಂದಿ ಭಾಷೆಯಲ್ಲಿ ಪರೀಕ್ಷೆಗಳನ್ನು ಬರೆಯುವುದು ಕಷ್ಟವಾಗಲಿದೆ. ಭಾಷಾ ತೊಡಕಿನಿಂದಾಗಿ ಬಹುತೇಕ ಜನ ಉತ್ತರ ಭಾರತದವರೇ ಹೆಚ್ಚಾಗಿ ಉದ್ಯೋಗ ಪಡೆಯಲು ಅವಕಾಶವಾಗಲಿದೆ. ಇದರಿಂದಾಗಿ ಪ್ರಾದೇಶಿಕ ಭಾಷೆಯಲ್ಲಿ ಕಲಿತವರು ಉದ್ಯೋಗದಿಂದ ವಂಚಿತರಾಗಲಿದ್ದಾರೆ. ಹೊರ ರಾಜ್ಯಗಳಿಂದ ಬರುವವರು ಸ್ಥಳೀಯ ಜನರೊಂದಿಗೆ ವ್ಯವಹರಿಸಲು ಹಾಗೂ ಇಲ್ಲಿನ ಜನ ಜೀವನದ ಪರಿಚಿಯ ಇಲ್ಲದೆ ಆಡಳಿತ ವ್ಯವಸ್ಥೆಯ ಕೆಟ್ಟು ಹೋಗಲಿದೆ ಎಂದರು.
ಉತ್ತರ ಕರ್ನಾಟಕದ ಜನರು ಉದ್ಯೋಗ ಇಲ್ಲದೆ ಬೇರೆಡೆಗೆ ಗುಳೆ ಹೋಗುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಏಕರೂಪದ ಪರೀಕ್ಷಾ ನೀತಿ, ನೇಮಕಾತಿಗಳು ಪ್ರಾದೇಶಿಕ ಅಸಮಾನತೆಗೆ ದಾರಿಮಾಡಿಕೊಡಲಿದೆ. ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಕೇಂದ್ರ ಹಣಕಾಸು ಸಚಿವರು ಕನ್ನಡಿಗರಗಷ್ಟೇ ಅಲ್ಲದೆ ದೇಶದ ಎಲ್ಲಾ ಪ್ರಾದೇಶಿಕ ಭಾಷಾ ಜನರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಜಯ ಕರ್ನಾಟಕ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಎಚ್.ಎಂ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಈ.ಕೆಂಪರಾಜ್, ಜಿಲ್ಲಾ ಕಾರ್ಯಾಧ್ಯಕ್ಷೆ ನಾಗರತ್ನಮ್ಮ, ತಾಲ್ಲೂಕು ಉಪಾಧ್ಯಕ್ಷ ಎಸ್.ಎಚ್.ರಾಮ್‌ಕುಮಾರ್, ಪಿ.ರಾಮಮೂರ್ತಿ, ಖಜಾಂಚಿ ಶಿವಕುಮಾರ್, ಸದಸ್ಯರಾದ ಮಂಜುನಾಥ,ಆನಂದ್, ಮುನಿಕೃಷ್ಣಪ್ಪ, ಶಾಮಣ್ಣ, ದೇವರಾಜು, ಪಿ.ಶೋಭಾ, ಪ್ರಮೀಳ, ಪದ್ಮ ಇದ್ದರು.