ದೊಡ್ಡಬಳ್ಳಾಪುರ: ಆಗಸ್ಟ್ 11 ರಂದು ಬೆಂಗಳೂರು ನಗರದ ಕಾಡುಗೊಂಡನಹಳ್ಳಿ,ಡಿಜೆ ಹಳ್ಳಿಯಲ್ಲಿ ಸಂಭವಿಸಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಗೆ ಕಾರಣವೆನ್ನಲಾಗುತ್ತಿರುವ ಎಸ್ ಡಿಪಿಐ, ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದಿಂದ ನಗರದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರಾಂತ ಕಾರ್ಯದರ್ಶಿ ದೊ.ಕೇಶವ ಮೂರ್ತಿ, ದೇವರಾಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿಯಲ್ಲಿ ಪೊಲೀಸ್ ಠಾಣೆ,ಅಶಾಂತಿ ಸೃಷ್ಟಿಸಿ ಹಿಂದೂಗಳ ಮೇಲೆ ನಡೆದ ಕೋಮುದಾಳಿ ಮಾಡಿದ ಮತಾಂಧರ ವ್ಯವಸ್ಥಿತ ಷಡ್ಯಂತ್ರದ ಕೈವಾಡವಿದೆ ಎಂದು ಈಗಾಗಲೇ ಮಾದ್ಯಮಗಳಲ್ಲಿ ವರದಿಯಾಗಿ ಜನತೆ ತಿಳಿದು ಬಂದಿರುತ್ತದೆ. ಈ ಕೋಮು ದಾಳಿ ಹಿಂದೆ ಎಸ್ ಡಿಪಿಐ ಹಾಗೂ ಪಿಎಫ್ ಐ ನಂತಹ ಸಮಾಜಘಾತುಕ ಸಂಘಟನೆಗಳು ನೇರವಾಗಿ ಪಾಲ್ಗೊಂಡು ಹಿಂದೂಗಳ ಆಸ್ತಿ ಪಾಸ್ತಿ ನಾಶಪಡಿಸಿ ಸಮಾಜದಲ್ಲಿ ನೆಲೆಸಿರುವ ಶಾಂತಿಗೆ ಭಂಗ ತಂದಿರುತ್ತಾರೆ. ಈ ಹಿಂದೆಯೂ ಈ ಘಟನೆಗಳು ಹಲವು ಬಾರಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ಕಾರ್ಯದಲ್ಲಿ ಭಾಗವಹಿಸಿ ಅಲ್ಲಿ ನೆಲೆಸಿರುವ ಹಿಂದೂ ಕುಟುಂಬಗಳ ಅಭದ್ರತೆ ಹಾಗೂ ಭಯದಿಂದ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಸಂಘಟನೆಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ವಿರುದ್ಧ ಅಸಭ್ಯ ಹಾಗೂ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಸದಾ ಹರುಬಿಡುತ್ತಿದ್ದು ಇಡೀ ಹಿಂದೂ ಸಮಾಜವೇ ಅವರ ಟಾರ್ಗೆಟ್ ಆಗಿರುತ್ತದೆ ಎಂದು ಆರೋಪಿಸಿದರು.
ಜಿಲ್ಲಾ ಅಧ್ಯಕ್ಷ ನಂದಾರಾಮ್ ಸಿಂಗ್ ಮಾತನಾಡಿ,ದೇಶದ ಅಖಂಡತೆ ಹಾಗೂ ಸುಭದ್ರತೆಗೆ ಮಾರಕವಾಗಿರುವ ಎಸ್ ಡಿಪಿಐ ಹಾಗೂ ಪಿಎಫ್ ಐ ಎಂಬ ಸಮಾಜ ಘಾತುಕ ಸಂಘಟನೆಗಳನ್ನು ಪೊಲೀಸ್ ಇಲಾಖೆ ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಕೂಡಲೇ ನಿಷೇಧಿಸಿ ಅವರ ಭಯೋತ್ಪಾದಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್, ಕಾರ್ಯದರ್ಶಿ ಡಾಬಸ್ ಪೇಟೆ ಮಂಜುನಾಥ್,ಜಿಲ್ಲಾ ಪ್ರಾಚಾರ ಪ್ರಮುಖ್ ನೆಲಮಂಗಲ ಹೇಮಂತಕುಮಾರ್,ಹೊಸಕೋಟೆ ತಾಲೂಕು ಅಧ್ಯಕ್ಷ ರಮೇಶ್,ದೇವನಹಳ್ಳಿ ತಾಲೂಕು ಅಧ್ಯಕ್ಷ ಅರವಿಂದ್,ಉಪಾಧ್ಯಕ್ಷ ಪ್ರಶಾಂತ್, ನಗರ ಕಾರ್ಯದರ್ಶಿ ಖಾಸ್ ಬಾಗ್ ವಾಸು, ಬಿಜೆಪಿಯ ಶಿವಶಂಕರ್,ಮುದ್ದಪ್ಪ,ಪುಷ್ಪಶಿವಶಂಕರ್, ಹಿಂಜಾವೆ ಮಹಿಳಾ ಘಟಕದ ಅಧ್ಯಕ್ಷೆ ಯಶೋಧ ರಘುನಾಥ್,ಸದಸ್ಯರಾದ ಘಾಟಿ ಚಿನ್ನಿ, ಪ್ರವೀಣ್ ಮತ್ತಿತರಿದ್ದರು.