ಲಖನೌ: ರಾಜ್ಯ ಸರ್ಕಾರ ಮಹಿಳೆಯರ ಸುರಕ್ಷತೆಗೆ ಬದ್ಧವಾಗಿದ್ದು ಯಾರೂ ಆತಂಕಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ಭುಗಿಲೆದ್ದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಟ್ವೀಟ್ ರಾಕ್ಷಸರ ವಿರುದ್ದ ಕೈಗೊಳ್ಳಲಿರುವ ಕ್ರಮ ದೇಶ ನೋಡಲಿದೆ ಎಂದಿದ್ದಾರೆ.
ರಾಜ್ಯದ ಮಹಿಳೆಯರೊಂದಿಗೆ ದುರ್ವರ್ತನೆ ತೋರುವ ರಾಕ್ಷಸರಿಗೆ ಶಿಕ್ಷೆ ನಿಶ್ಚಿತ ಎಂದಿರುವ ಅವರು, ನಾವು ನೀಡುವ ಶಿಕ್ಷೆ ಭವಿಷ್ಯದಲ್ಲಿ ಉದಾಹರಣೆಯಾಗಿ ನಿಲ್ಲಲಿದೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.
ರಾಜ್ಯದ ತಾಯಂದಿರು, ಸಹೋದರಿಯರು ಯಾವುದೇ ಕಾರಣಕ್ಕೂ ಆತಂಕಪಡುವ ಅವಶ್ಯಕತೆಯಿಲ್ಲ. ಅವರ ಸುರಕ್ಷತೆಗೆ ನಾವು ವಚನಬದ್ಧರಾಗಿದ್ದು, ಹತ್ರಾಸ್ ದುರುಳರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.

