ದೊಡ್ಡಬಳ್ಳಾಪುರ: ಅಧಿಕಾರದ ಅಮಲಿನಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ವರ್ತಿಸಿದ್ದರಿಂದ ಜಿಪಂ ಅಧ್ಯಕ್ಷ ಸ್ಥಾನದ ಬದಲಾವಣೆಯ ಕೂಗು ಕೇಳಿ ಬರಲು ಕಾರಣ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದಾರೆ.
ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಅ.14 ರಂದು ಜಿಲ್ಲಾಪಂಚಾಯಿತಿ ಅಧ್ಯಕ್ಷ ಸ್ಥಾನ ಅವಿಶ್ವಾಸ ನಿರ್ಣಯ ಸಭೆ ನಡೆಯಲಿದೆ. ಈ ಬೆನ್ನಲ್ಲೆ ಅಧ್ಯಕ್ಷೆ ಮಾಧ್ಯಮಗಳ ಮೂಲಕ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಮಾಜಿ ಸಚಿವ ಕೃಷ್ಣಭೈರೇಗೌಡರ ಮೇಲೆ ಮಾಡಿರುವ ಆರೋಪಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ತೀಕ್ಷ್ಣ ಉತ್ತರ ನೀಡಿದ್ದಾರೆ.
ಹೈಕಮಾಂಡ್ ಸೂಚನೆಗೆ ಎಲ್ಲರೂ ಬದ್ದರಾಗಬೇಕಿದೆ, ಅದೂ ಬಿಟ್ಟು ಬೇಕಾಬಿಟ್ಟಿಯಾಗಿ ಹೇಳಿಕೆ ನೀಡುವುದು ಸಲ್ಲದು. ಈ ಹಿಂದೆ ನಿರ್ಣಯದಂತೆ ಮೂರು ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷೆ ಸ್ಥಾನದ ಆಯ್ಕೆ ನಿರ್ಣಯವಾಗಿದೆ. ಅದರಂತೆ, ಯಾರೇ ಆದರೂ ನಡೆದುಕೊಳ್ಳಬೇಕು. ಅದು ಬಿಟ್ಟು ಮತ್ತೊಬ್ಬರಿಗೆ ಅಧಿಕಾರ ಬಿಟ್ಟುಕೊಡುವ ಸಂದರ್ಭದಲ್ಲಿ ಜಾತಿ ಹೆಸರು ತಂದು ಆರೋಪಿಸುವುದು, ಬಾಯಿಗೆ ಬಂದಂತೆ ಹೇಳಿಕೆ ನೀಡುವು ಎಷ್ಟು ಸರಿ..? ಉಪಾಧ್ಯಕ್ಷೆ ಸಹ ಇವರಂತೆ ಆಯ್ಕೆಯಾದವರು ಅವರು ಹೈಕಮಾಂಡ್ ನಿಲುವಿಗೆ ಬದ್ದರಾಗಿದ್ದಾಗ ಇವರದ್ದೇನು ಪ್ರತಿಷ್ಠೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷೆ ಅಧಿಕಾರದ ಅವಧಿಯಲ್ಲಿ ಉತ್ತಮ ಅಧಿಕಾರ ನಡೆಸದೆ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಮಾತ್ರವಲ್ಲದೆ, ಜೆಡಿಎಸ್ ಸದಸ್ಯರು ಸಹ ಅವಿಶ್ವಾಸ ನಿರ್ಣಯ ಸಭೆಗೆ ಸಹಿ ಹಾಕಿದ್ದಾರೆ ಎಂದಾದರೆ ಇವರ ಆಡಳಿತ ವೈಖರಿ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.
ಸಹಿ ಹಾಕಲು ಸದಸ್ಯರಿಗೆ ಒತ್ತಡ ಹೇರಿದ್ದರೆ ರಾಜಕಾರಣದಿಂದ ನಿವೃತ್ತಿ:
ಅವಿಶ್ವಾಸ ನಿರ್ಣಯಕ್ಕೆ ಸದಸ್ಯರಿಗೆ ಬಲವಂತವಾಗಿ ಒತ್ತಡ ಹೇರಿ ಸಹಿ ಹಾಕಿಸಿದ್ದೇನೆ ಎಂದು ಆರೋಪಿಸಿದ್ದಾರೆ. ಇದನ್ನ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ.ಇವರ ಆಡಳಿತ ವೈಖರಿಗೆ ಬೇಸತ್ತು ಕಾಂಗ್ರೆಸ್ ಪಕ್ಷವಲ್ಲದೆ ಇತರ ಪಕ್ಷದ ಸದಸ್ಯರು ಸಹಿ ಹಾಕಿದ್ದಾರೆ ಎಂದರು.
ಜಿಲ್ಲಾಪಂಚಾಯಿತಿ ಅನುದಾನದ ಕಾಮಗಾರಿ, ಅನುಷ್ಠಾನದ ಕುರಿತು ಕನಿಷ್ಠ ಶಾಸಕರಿಗೆ ಮಾಹಿತಿ ನೀಡಲಿಲ್ಲ. ಅಲ್ಲದೆ ಕಾಮಗಾರಿಯನ್ನು ಅನ್ಯ ಪಕ್ಷದವರಿಗೆ ನೀಡಿದರೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ದುಡಿದ ಇವರ ಬೆಂಬಲಿಗರು ನೀಡಲಿಲ್ಲ ಆದರೂ ಈ ಕುರಿತು ನಾವೆಲ್ಲು ಪ್ರಶ್ನೆ ಮಾಡಲಿಲ್ಲ ಎಂದರು.
ಈಗ ಜಾತಿ ನೆನಪಾಯಿತೆ…?
ಅಧಿಕಾರ ಇದ್ದಾಗ ತನ್ನ ಜಾತಿಯ ಜನತೆ ನೆನಪಾಗದವರಿಗೆ ಈಗ ಜಾತಿ ನೆನಪಾಯಿತೆ ಎಂದು ಪ್ರಶ್ನಿಸಿದ ಅವರು, ಯಾದವ ಜನಾಂಗಕ್ಕೆ ಅಧಿಕಾರದಲ್ಲಿ ಇದ್ದಾಗ ಏನೇನೂ ಮಾಡಿದ್ದಾರೆ ಎಂದು ಯಾದವ ಸಮುದಾಯವರಿಗೆ ಗೊತ್ತಿದೆ. ನಾವೆಂದು ಜಾತಿ ರಾಜಕಾರಣ ಮಾಡಿಲ್ಲ. ಸದಸ್ಯರಲ್ಲಿ ವಿಶ್ವಾಸ ಉಳಿಸಿಕೊಳ್ಳದೆ ಮನಸೋಇಚ್ಚೆ ಮಾತನಾಡುವುದು ಸರಿಯಲ್ಲ ಎಂದರು.
ಯಾರೆ ಆಗಲಿ ಹೊಂದಾಣಿಕೆಯಂತೆ ನಡೆದುಕೊಳ್ಳಬೇಕಿದೆ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿರದೆ ದಿಕ್ಕರಿಸಿ ಮಾಡುವುದಾದರೆ ಮಾಡಲಿ ನಾವು ನೋಡುತ್ತೇವೆ ಎಂದಿದ್ದಾರೆ.

