ದೊಡ್ಡಬಳ್ಳಾಪುರ: ನಗರದಲ್ಲಿ ಸೋಮವಾರ ನಡೆದ ನೇಕಾರರ ರಾಜ್ಯ ಮುಖಂಡರ ಸಭೆಯಲ್ಲಿ ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.12 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಲು ವಿವಿಧ ಹೋರಾಟ ಸಂಘಟನೆಗಳು ಒಗ್ಗೂಡಿ ನೇಕಾರರ ಮಹಾಮಂಡಲ ರಚಿಸಿಕೊಳ್ಳಲು ನಿರ್ಧರಿಸಲಾಗಿದೆ.
ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತ್ರಾಜ್, ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ಹೊಸದಾಗಿ ವಿದ್ಯುತ್ ಘಟಕಗಳನ್ನು ಸ್ಥಾಪನೆ ಮಾಡಿರುವ ನೇಕಾರರಿಗೆ ವಿದ್ಯುತ್ ರಿಯಾಯಿತಿ ನಿಲ್ಲಿಸಲಾಗಿದೆ. ಇದಲ್ಲದೆ ವಿದ್ಯುತ್ ಕ್ಷೇತ್ರವನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿರುವುದರಿಂದ ರಿಯಾಯಿತಿ ಧರದಲ್ಲಿ ಮಗ್ಗಗಳಿಗೆ ನೀಡಲಾಗುತ್ತಿರುವ ವಿದ್ಯುತ್ ಪೂರೈಕೆಯು ಸ್ಥಗಿತವಾಗಲಿದೆ ಎಂದರು.
ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ನೇಕಾರರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ಗಳನ್ನು ನೀಡಿವೆ. ಜವಳಿ ಇಲಾಖೆ ವತಿಯಿಂದ ಗುರಿತಿನ ಕಾರ್ಡ್ಗಳನ್ನು ಸಹ ನೀಡಲಾಗಿದೆ. ಆದರೆ ನಮ್ಮಲ್ಲಿನ ನೇಕಾರಿಕೆಯಲ್ಲಿನ ಕಾರ್ಮಿಕರಿಗೆ ಘೋಷಣೆ ಮಾಡಿರುವ ₹2 ಸಾವಿರ ಪರಿಹಾರ ಪಡೆಯಲು ಹಲವಾರು ನಿಬಂಧನೆಗಳನ್ನು ವಿಧಿಸಲಾಗಿದೆ. ಹೀಗಾಗಿ ಇಡೀ ರಾಜ್ಯದಲ್ಲಿ 55 ಸಾವಿರ ನೇಕಾರರು ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ನೇಕಾರರ ಬಳಿ ದಾಸ್ತಾನು ಇರುವ ಸೀರೆಗಳನ್ನು ಖರೀದಿಸುವಂತೆ ಸರ್ಕಾರ ಆದೇಶ ಮಾಡಿ ತಿಂಗಳುಗಳೆ ಕಳೆದಿದ್ದರು ಇನ್ನು ಜಾರಿಗೆ ಮಾತ್ರ ಬಂದಿಲ್ಲ ಎಂದು ದೂರಿದರು.
ಈಗ ನೇಕಾರರು ಬಳಸುವ ಒಂದು ಯೂನಿಟ್ ವಿದ್ಯುತ್ಗೆ ₹1.25 ಶುಲ್ಕ ವಿಧಿಸಲಾಗುತ್ತಿದೆ. ಆದರೆ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಒಂದು ಯೂನಿಟ್ ವಿದ್ಯುತ್ ಬೆಲೆ ₹5 ಆಗಲಿದೆ. ರಾಜ್ಯ ಸರ್ಕಾರ ಅಡುಗೆ ಅನಿಲ ಮಾದರಿಯಲ್ಲಿ ನೇಕಾರರಿಗೆ ವಿದ್ಯುತ್ ಸಬ್ಸಿಡಿಯನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎನ್ನುವ ಸುಳ್ಳು ಭರವಸೆ ನೀಡುತ್ತಿದೆ. ಈಗಾಗಲೇ ಅಡುಗೆ ಅನಿಲ್ ಸಬ್ಸಿಡಿ ಹಣ ಗ್ರಾಹಕರ ಖಾತೆಗಳಿಗೆ ಜಮಾ ಆಗುತ್ತಿಲ್ಲ. ನೇಕಾರರ ವಿದ್ಯುತ್ ಸಬ್ಸಿಡಿಯು ಸಹ ಇದೇ ರೀತಿ ಆಗುವ ಅಪಾಯವಿದೆ ಎಂದು ಎಚ್ಚರಿಸಿದರು.
ಅ.12 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ನವೆಂಬರ್ 2 ರಂದು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೇಕಾರರ ಮಹಾಮಂಡಲದ ನೇತೃತ್ವದಲ್ಲಿ ಧರಣಿ ನಡೆಸಲು ಸಭೆಯಲ್ಲಿ ನಿರ್ಧಿಸಲಾಗಿದೆ ಎಂದರು.
ಸಭೆಯಲ್ಲಿ ಬೆಳಗಾವಿ ಜಿಲ್ಲಾ ನೇಕಾರರ ವೇದಿಕೆ ಅಧ್ಯಕ್ಷ ಪಾಂಡುರಂಗ ದೋತ್ರೆ,ಕಾರ್ಯದರ್ಶಿ ಪರಶುರಾಮಡಗೆ, ಬೆಂಗಳೂರಿನ ನೇಕಾರರ ಸಂಘದ ಅಧ್ಯಕ್ಷ ಹೆಣ್ಣಿಗೆರೆ ವೆಂಕಟರಾಮಯ್ಯ, ಗೊಟ್ಟಿಗೆರೆ ನೇಕಾರರ ಮುಖಂಡ ಎಂ.ಎಸ್.ನಾಗೇಂದ್ರ,ನೇಕಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಪಿ.ಎ.ವೆಂಕಟೇಶ್, ರಾಮನಗರ ಜಿಲ್ಲೆ ಉಮಾಪತಿ, ನೇಕಾರ ಹೋರಾಟ ಸಮಿತಿ ಕೆ.ಜಿ.ಗೋಪಾಲ್,ಡಿ.ಜಿ.ಜಗದೀಶ್, ಉಜ್ಜಿನಿ ನಾರಾಯಣಪ್ಪ, ಆರ್.ರಂಗಸ್ವಾಮಿ, ಎಸ್.ಲೋಕೇಶ್, ಸೂರ್ಯಪ್ರಕಾಶ್ ಇದ್ದರು.

