ದೊಡ್ಡಬಳ್ಳಾಪುರ: ಅಕ್ರಮವಾಗಿ ನಿರ್ಮಿಸುತ್ತಿರುವ ಬಡಾವಣೆಗಳನ್ನು ತೆರವು ಮಾಡುವ ಕಾರ್ಯಕ್ಕೆ ತಹಸೀಲ್ದಾರ್ ಟಿ.ಎಸ್.ಶಿವರಾಜ್ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯೋನ್ಮುಖವಾಗಿದೆ.
ಮಂಗಳವಾರಂದು ತಾಲೂಕಿನ ಮಧುರೆ ಹೋಬಳಿಯ ಹೊನ್ನಾವರ ಗ್ರಾಮ ಪಂಚಾಯಿತಿಯ ಸರ್ವೆ ನಂ.73ರಲ್ಲಿ 3 ಎಕರೆ, ನಾಗೇನಹಳ್ಳಿ ಗ್ರಾಮದ ಸರ್ವೆ ನಂ.54/9 ರಲ್ಲಿ 9.20 ಎಕರೆ, ಹಾಗೂ ಕೆಂಜಿಗನಹಳ್ಳಿ ಸರ್ವೆ ನಂ.69/1ರಲ್ಲಿ 1.31ಎಕರೆ, ಸರ್ವೆ ನಂ.69/2ರಲ್ಲಿ 3 ಎಕರೆ ಸೇರಿ ಒಟ್ಟಾರೆ 17 ಎಕರೆ 11 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಬಡಾವಣೆಗಳನ್ನು ತೆರವುಗೊಳಿಸಲಾಗಿದೆ.
ಸದನ ಸಮಿತಿ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ಅನಧಿಕೃತ ಬಡಾವಣೆಗಳು ಅಂದರೆ ಭೂ ಪರಿವರ್ತನೆ ಆಗದೇ ಇರುವ ಹಾಗೂ ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೇ ಇರುವ ಬಡಾವಣೆಗಳನ್ನು ತೆರವು ಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಹಶೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ಈ ವೇಳೆ ಮಧುರೆ ಹೋಬಳಿ ರಾಜಸ್ವ ನಿರೀಕ್ಷಕ ಮುನಿರಾಜು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

