ದೊಡ್ಡಬಳ್ಳಾಪುರ: ಒಂದೆರಡು ಹಸುಗಳನ್ನು ಸಾಕಾಣಿಕೆ ಮಾಡುವ ರೈತರಿಗೆ ಅನುಕೂಲವಾಗುವಂತೆ ಹಾಲು ಕರೆಯುವ ಪುಟ್ಟ ಯಂತ್ರಗಳನ್ನು ವಿನ್ಯಾಸಗೊಳಸಬೇಕು ಎಂದು ಪ್ರಗತಿಪರ ರೈತ ಎನ್.ಪಿ.ಬಸವರಾಜ್ ಒತ್ತಾಯಿಸಿದರು.
ಅವರು ತಾಲ್ಲೂಕಿನ ನಾಗಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ನಮ್ಮಲ್ಲಿನ ಬಹುತೇಕ ಜನ ರೈತರು ಕೃಷಿಯೊಂದಿಗೆ ಒಂದೆರಡು ಹಸುಗಳನ್ನು ಸಾಕಾಣಿಕೆ ಮಾಡುವ ಮೂಲಕ ಹೈನುಗಾರಿಕೆ ಮಾಡುವ ರೈತರ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ ಬಮೂಲ್ ವತಿಯಿಂದ ದೊಡ್ಡ ಹಾಲು ಕರೆಯುವ ಯಂತ್ರವನ್ನು ₹28 ಸಾವಿರ ನೀಡಿ ಕೊಳ್ಳಬೇಕಿದೆ. ಒಕ್ಕೂಟ ಶೇ50ರಷ್ಟು ಸಬ್ಸಿಡಿ ನೀಡುತ್ತದೆಯಾದರು ಇಷ್ಟೊಂದು ದೊಡ್ಡಮೊತ್ತವನ್ನು ರೈತರು ಭರಿಸುವಷ್ಟು ಆರ್ಥಿಕವಾಗಿ ಸದೃಢರಾಗಿಲ್ಲ. ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸಬೇಕು ಅಥವಾ ಹಾಲು ಕರೆಯುವ ಪುಟ್ಟ ಯಂತ್ರಗಳ ಆವಿಷ್ಕಾರವಾಗಬೇಕು. ಇಡೀ ರಾಜ್ಯದಲ್ಲಿಯೇ ಬೆಂಗಳೂರು ಹಾಲು ಒಕ್ಕೂಟ ಹಾಲಿನ ಉತ್ಪಾದನೆ ಹಾಗೂ ಮಾರಾಟ ಎರಡರಲ್ಲೂ ಮುಂಚೂಣಿಯಲ್ಲಿದೆ. ಹೀಗಾಗಿ ಹಾಲು ಉತ್ಪಾದಕರಿಗು ಹೆಚ್ಚಿನ ಸಹಾಯಗಳನ್ನು ಮಾಡಬೇಕಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಬಮೂಲ್ನ ದೊಡ್ಡಬಳ್ಳಾಪುರ ಹಾಲು ಶಿಬಿರದ ಉಪ ವ್ಯವಪಸ್ಥಾಪಕ ಕೆ.ಜಿ.ಗೋಪಾಲಕೃಷ್ಣ, ರಾಜ್ಯದ ಇತರೆ ಹಾಲು ಒಕ್ಕೂಟಗಳಿಗಿಂತಲು ಹೆಚ್ಚನ ಸೌಲಭ್ಯ ಹಾಗೂ ಬೆಲೆಯನ್ನು ಹಾಲು ಉತ್ಪಾದಕರಿಗೆ ನೀಡುತ್ತಿದೆ. ಲಾಕ್ಡೌನ್ ಆರಂಭದಿಂದ ತೆರವಾದ ನಂತರವು ಹಾಲು ಮಾರುಕಟ್ಟೆ ಸುಧಾರಣೆಯಾಗಿಲ್ಲ.ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದ ಹಾಲು ಸಹ ನಿಲುಗಡೆಯಾಗಿದೆ.ಹಾಲಿನಿಂದ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಕಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ನಾಗಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್.ಮಹೇಶ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಅನುಸೂಯ, ನಟರಾಜು, ಹರೀಶ್ಕುಮಾರ್ ಅವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.
ಸಭೆಯಲ್ಲಿ ವಿಸ್ತರಣಾಧಿಕಾರಿ ಜಿ.ಮುನಿರಾಜು, ಸಂಘದ ನಿರ್ದೇಶಕರಾದ ನಾಗಮಣಿ, ಅನುಸೂಯ, ಎನ್.ವಿ.ನಾಗರಾಜು, ಮಲ್ಲರಾಜು, ಎನ್.ಬಿ.ರಾಜಣ್ಣ, ವಿರೂಪಾಕ್ಷಯ್ಯ, ವಿನುತ, ಚಿಕ್ಕಸಿದ್ದಪ್ಪ, ಅನಂತಪದ್ಮನಾಭಚಾರ್ಯ, ಕಿರಣ್, ಶಿವಮ್ಮ, ಮುಖ್ಯಕಾರ್ಯನಿರ್ವಾಹಕ ಎಂ.ದೇವರಾಜ್ ಇದ್ದರು.

