ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮದ್ಯ ಮಾರಾಟವನ್ನು ಅನಿರೀಕ್ಷಿತವಾಗಿ ನಿಷೇಧ ಹೇರಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ಕಾರ್ಯಕ್ಕೆ ಜಿಲ್ಲಾಧ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ದ್ವೈವಾರ್ಷಿಕ ಚುನಾವಣೆ-2020ರ ಸಂಬಂಧ ಮತದಾನವು ಇಂದು ಬೆಳಿಗ್ಗೆ 8:00 ರಿಂದ ಆರಂಭವಾಗಿದ್ದು ಸಂಜೆ 5:00 ಗಂಟೆಯವರೆಗೂ ನಡೆಯಲಿದೆ.ಈ ಹಿನ್ನಲೆಯಲ್ಲಿ ಮತದಾನವು ಶಾಂತಿ, ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ಸಲುವಾಗಿ ಮತದಾನ ಅಂತ್ಯಗೊಳ್ಳುವುದಕ್ಕೆ ನಿಗದಿಪಡಿಸಿರುವ ಅವಧಿಯು 48 ಗಂಟೆಗಳ ಪೂರ್ವದಲ್ಲಿ ಅಂದರೆ ಅಕ್ಟೋಬರ್ 26 ರ ಸಂಜೆ 5:00 ಗಂಟೆಯಿಂದ ಅಕ್ಟೋಬರ್ 28 ರ ಸಂಜೆ 5:00 ಗಂಟೆಯವರೆಗಿನ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಮತದಾರರು ನಿರ್ಭೀತವಾಗಿ ಮತದಾನ ಮಾಡಲು ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದ ವಾತಾವರಣ ಕಲ್ಪಿಸಲು ಪ್ರಜಾ ಪ್ರತಿನಿಧಿ ಕಾಯ್ದೆ, 1951ರ ಕಲಂ 126 ಮತ್ತು 126ಎ ಗಳ ಅನ್ವಯ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಹಲವು ದಿಟ್ಟ ಹಾಗೂ ದಿಢೀರ್ ಕ್ರಮ ಕೈಗೊಂಡು ಆದೇಶ ಹೊರಡಿಸಿದ್ದು ಹಲವು ಅಕ್ರಮಗಳ ಕಡಿವಾಣಕ್ಕೆ ಕಾರಣವಾಗಿದೆ.
ಅಕ್ರಮ ಮದ್ಯ ಮಾರಾಟಕ್ಕೆ ಬಿತ್ತು ಡಿಸಿ ರವೀಂದ್ರರಿಂದ ಬ್ರೇಕ್..! ಚುನಾವಣೆಯಲ್ಲಿ ಅಕ್ರಮ ತಡೆಗಟ್ಟಲು ಪ್ರತಿ ಚುನಾವಣೆಯಲ್ಲಿ ಜಿಲ್ಲಾಡಳಿತ ಹಲವು ಆದೇಶ ಮಾಡುತ್ತವೆ. ಆದರೆ ಇದರ ಸುಳಿವು ಅರಿತವರು ಪರ್ಯಾಯವಾಗಿ ಅಕ್ರಮಗಳನ್ನು ನಡೆಸುತ್ತಿದ್ದದ್ದು ಎಲ್ಲಡೆ ಸಾಮಾನ್ಯವಾಗಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮದ್ಯ ಮಾರಾಟವನ್ನು ಅನಿರೀಕ್ಷಿತವಾಗಿ ನಿಷೇಧ ಹೇರಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರ ಕಾರ್ಯಕ್ಕೆ ಜಿಲ್ಲಾಧ್ಯಂತ ವ್ಯಾಪಕ ಪ್ರಶಂಸೆ ಕೇಳಿಬರುತ್ತಿದೆ.
ಮದ್ಯ ಮಾರಾಟಕ್ಕೆ ನಿಷೇಧದ ಕುರಿತು ಯಾವುದೇ ಸುಳಿವು ನೀಡದೆ ಕೇವಲ ಒಂದು ಗಂಟೆ ಸಮಯ ಉಳಿದಿರುವಂತೆ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ135ಸಿ ರ ಅನ್ವಯ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿರ್ಬಂಧಿಸಿ ಒಣ ದಿನಗಳನ್ನು (ಡ್ರೈ ಡೇಸ್) ಘೋಷಿಸಿದೆ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಈ ಅವಧಿಯಲ್ಲಿ ಮುಚ್ಚಲು ಆದೇಶಿಸಿದ್ದು ಜಿಲ್ಲೆಯಾದ್ಯಂತ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದಿದೆ.
ಅಕ್ಟೋಬರ್ 26 ಸಂಜೆ 4.5ಕ್ಕೆ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ135ಸಿ ರ ಅನ್ವಯ ಅಕ್ಟೋಬರ್ 26ಸಂಜೆ 5:00 ಗಂಟೆಯಿಂದ ಅಕ್ಟೋಬರ್ 28 ಮಧ್ಯರಾತ್ರಿ 12:00 ಗಂಟೆಯವರೆಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿರ್ಬಂಧಿಸಿ ಒಣ ದಿನಗಳನ್ನು (ಡ್ರೈ ಡೇಸ್) ಘೋಷಿಸಿತ್ತು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಈ ಅವಧಿಯಲ್ಲಿ ಮುಚ್ಚಲು ಆದೇಶಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್ ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದರು.
ಈ ಅನಿರೀಕ್ಷಿತ ಆದೇಶದಿಂದಾಗಿ ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಳ್ಳು ಸಮಯಾವಕಾಶ ದೊರಕದ ಅಕ್ರಮ ಮದ್ಯ ಮಾರಾಟಕ್ಕೆ ಶೇ.70 ಕಡಿವಾಣ ಬಿದ್ದಿದೆ ಎನ್ನುವುದು ಸಾರ್ವಜನಿಕರ ಪ್ರಶಂಸನೀಯ ಅಭಿಪ್ರಾಯವಾಗಿದೆ.
ನ್ಯಾಯಸಮ್ಮತ ಮತದಾನದ ವಾತಾವರಣ ಕಲ್ಪಿಸಲು ಕ್ರಮ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಮತದಾರರು ನಿರ್ಭೀತವಾಗಿ ಮತದಾನ ಮಾಡಲು ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದ ವಾತಾವರಣ ಕಲ್ಪಿಸಲು ಈ ಆದೇಶವನ್ನು ಕೈಗೊಳ್ಳಲಾಯಿತು ಎಂದು ಹರಿತಲೇಖನಿಗೆ ತಿಳಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ ಕಡಿವಾಣಕ್ಕೆ ಡಿಸಿ ಅವರ ದಿಢೀರ್ ಆದೇಶ ಪ್ರಶಂಸನೀಯ
ಪ್ರತಿ ಚುನಾವಣೆ ಸಂಧರ್ಭದಲ್ಲಿ ಮದ್ಯ ಮಾರಾಟ ನಿಷೇಧಕ್ಕು ಮುನ್ನ, ಅಕ್ರಮ ಮದ್ಯ ಮಾರಾಟಗಾರರು ದಾಸ್ತಾನು ಮಾಡಿಕೊಂಡು ವಿಪರೀತವಾದ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆದರೆ ಈ ಚುನಾವಣೆಯಲ್ಲಿ ಯಾವುದೇ ಸುಳಿವು ನೀಡದೆ ಏಕಾಏಕಿ ಮದ್ಯ ನಿಷೇಧ ಮಾಡಿದ್ದು, ಅಕ್ರಮ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಇಂತಹ ತ್ವರಿತವಾದ ಆದೇಶಗಳಿಂದ ಮತ್ತಷ್ಟು ಅಕ್ರಮಗಳನ್ನು ತಡೆಯಬಹುದು: ತಾಪಂ ಸದಸ್ಯ ಕಣಿವೇಪುರ ಸುನೀಲ್ ಕುಮಾರ್
ಗ್ರಾಮೀಣ ಪ್ರದೇಶಗಳಲ್ಲಿ ಮೂರು ದಿನಗಳ ಸ್ಟಾಕ್..!
ವಿಜಯದಶಮಿ ಹಬ್ಬದ ಅಂಗವಾಗಿ ಅಕ್ರಮ ಮದ್ಯ ಮಾರಾಟಗಾರರು ಮೂರು ದಿನಗಳ ಮುಂಚಿತವಾಗಿ ಮದ್ಯವನ್ನು ದಾಸ್ತಾನು ಮಾಡಿರುವುದರಿಂದ ಜಿಲ್ಲಾಧಿಕಾರಿ ಅವರ ದಿಢೀರ್ ಆದೇಶ ಅಕ್ರಮ ಮಾರಾಟ ತಡೆಗೆ ಯಾವುದೇ ಪ್ರಯೋಜನವಾಗಿಲ್ಲ: ಮಾದಾರ ಚನ್ನಯ್ಯ ಮಹಾ ಸಭಾದ ತಾಲೂಕು ಅಧ್ಯಕ್ಷ ಆದಿತ್ಯ ನಾಗೇಶ್.

