ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಎಂಸಿಎಸ್) ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಇನ್ನು ಒಂದು ದಿನ ಮೊದಲೇ ಬಿಜೆಪಿ ಬೆಂಬಲಿತ ಎಲ್ಲಾ 13 ಕ್ಷೇತ್ರದ ಆಕ್ಷಾಂಕಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಬಿಜೆಪಿ ತಾಲ್ಲೂಕು ವಕ್ತಾರ ನಾಗರಾಜು ಅವರು ನೀಡಿರುವ ಆಕ್ಷಾಂಕಿಗಳ ಪಟ್ಟಿಯಂತೆ ‘ಎ’ ತರಗತಿಯಿಂದ ವೇಣುಕುಮಾರ್, ಜೆ.ವೈ.ಮಲ್ಲಪ್ಪ, ಶ್ರೀನಿವಾಸ್. ‘ಬಿ’ ತಗತಿಯ ಸಾಮಾನ್ಯ ಸ್ಥಾನಕ್ಕೆ ಟಿ.ವಿ.ಲಕ್ಷ್ಮೀನಾರಾಯಣ್,ವಬಿ.ಸಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣಶೆಟ್ಟಿ. ಮಹಿಳಾ ಮೀಸಲು ಸ್ಥಾನಕ್ಕೆ ತುಂಗಭದ್ರಾ ಆರ್.ಚಿದಾನಂದ, ಉಮದೇವಿಆಲಹಳ್ಳಿ. ಬಿಸಿಎಂ ‘ಎ’ ಮೀಸಲು ಸ್ಥಾನಕ್ಕೆ ಪ್ರಕಾಶ್ ಕಮಾರ್, ಚಂದ್ರಶೇಖರ್ ಆಲಹಳ್ಳಿ, ಟಿ.ಜಿ.ಮಂಜುನಾಥ್. ಬಿಸಿಎಂ ‘ಬಿ’ ಮೀಸಲು ಸ್ಥಾನಕ್ಕೆ ಆನಂದ್ ಕಮಾರ್, ಎಸ್ಸಿ ಮೀಸಲು ಸ್ಥಾನಕ್ಕೆ ಗೋಪಾಲ್ ಯಕ್,ಎಸ್ಟಿ ಮೀಸಲು ಸ್ಥಾನಕ್ಕೆ ಪ್ರೇಮ್ ಕುಮಾರ್.
ಅಂತಿಮಗೊಳ್ಳದ ಕಾಂಗ್ರೆಸ್-ಜೆಡಿಎಸ್ ಪಟ್ಟಿ: ಜೆಡಿಎಸ್ ಪಕ್ಷದಲ್ಲಿ ಹೈಕಮಾಂಡ್ ಯಾರು ಎನ್ನುವುದೇ ದೊಡ್ಡ ಗೊಂದಲವಾಗಿದ್ದು, ಟಿಎಪಿಎಂಸಿಎಸ್ ಚುನಾವಣೆಗೆ ಎರಡು ಬಣಗಳಾಗಿ ನಾಮ ಪತ್ರಸಲ್ಲಿಸಲು ಸಿದ್ದತೆಗಳು ನಡೆದಿವೆ. ಟಿಎಪಿಎಂಸಿಎಸ್ ಚುನಾವಣ ಹಿನ್ನೆಲೆಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರ ಅಧ್ಯಕ್ಷತೆಯಲ್ಲಿ ಆಕಾಂಕ್ಷಿಗಳ ಸಭೆ ನಡೆದಾಗಲು ಸಹ ಬಹುತೇಕ ಜನ ಆಕಾಂಕ್ಷಿಗಳು ಸಭೆಗೆ ಗೈರು ಹಾಜರಾಗಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಅವರ ಮುಖಂಡತ್ವದಲ್ಲಿ 13 ಸ್ಥಾನಗಳಿಗು ನಾಮ ಪತ್ರಸಲ್ಲಿಸಲು ಸಿದ್ದತೆಗಳು ಆರಂಭಗೊಂಡಿವೆ.
ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಎರಡು ಬಾರಿ ಸಭೆಗಳನ್ನು ನಡೆಸಿದ್ದರು ಸಹ ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಾಮ ಪತ್ರ ಸಲ್ಲಿಸುವ ಕೊನೆ ಸಮಯದವರೆಗೂ ಕಾದುನೋಡುವ ತಂತ್ರವನ್ನು ಕಾಂಗ್ರೆಸ್ ಮುಖಂಡರು ಅನುಸರಿಸುತ್ತಿದ್ದಾರೆ. ಆದರೆ ಈಗಾಗಲೇ ಕೆಲ ಆಕಾಂಕ್ಷಿಗಳು ಪ್ರಚಾರವನ್ನೇ ಆರಂಭಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲೂ ಹೈಕಮಾಂಡ್ ಹಿಡಿತ ಸಡಿಲವಾಗಿದೆ ಎನ್ನಲಾಗುತ್ತಿದೆ.
13 ಸ್ಥಾನಗಳನ್ನು ಹೊಂದಿರುವ ಟಿಎಪಿಎಂಸಿಎಸ್ನಲ್ಲಿ ‘ಎ’ತರಗತಿಯಿಂದ 4 (ವಿಎಸ್ಎಸ್ಎನ್ಗಳಿಂದ), ‘ಬಿ’ ತರಗತಿಯಿಂದ 9 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 9 ಸ್ಥಾನಗಳ ಪೈಕಿ ಮಹಿಳಾ ಅಭ್ಯರ್ಥಿಗಳಿಗೆ 2 ಸ್ಥಾನ ಮೀಸಲು. ಸಾಮಾನ್ಯ 3, ಬಿಸಿಎಂ ‘ಎ’ 1, ಬಿಸಿಎಂ ‘ಬಿ’ 1, ಎಸ್ಸಿ 1, ಎಸ್ಟಿ ಅಭ್ಯರ್ಥಿಗೆ 1 ಸ್ಥಾನ ಮೀಸಲಾಗಿದೆ.
ನಾಮ ಪತ್ರಗಳ ಸಲ್ಲಿಕೆ ಅ.29 ರಿಂದ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ. ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನ ಅ.30. ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಲು ನ.1 ರಂದು ಮಧ್ಯಾಹ್ನ 3 ಗಂಟೆಯವರೆಗೆ ಅವಕಾಶ ಇದೆ. ನ.2 ರಂದು ಚುನಾವಣ ಕಣದಲ್ಲಿ ಉಳಿದವರ ಅಂತಿಮಪಟ್ಟಿ ಪ್ರಕಟವಾಗಲಿದೆ. ನ.8 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ನಡೆಯಲಿದೆ.

