ಬೆಂಗಳೂರು: ಜಯಮ್ಮ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷೆಯಾಗಿ ಕನ್ಯಾಕುಮಾರಿ ಶ್ರೀನಿವಾಸ್ ಇಂದು ಅಧಿಕಾರ ಸ್ವೀಕರಿಸಿದರು.
ಜಿಪಂ ಕಚೇರಿಯಲ್ಲಿ ಉಪಕಾರ್ಯದರ್ಶಿ ಕರಿಯಣ್ಣ ಅವರಿಂದ ಅಧಿಕಾರ ಸ್ವಿಕರಿಸಿ ಮಾತನಾಡಿದ ಕನ್ಯಾಕುಮಾರಿ ಶ್ರೀನಿವಾಸ್. ಇಂದಿರಾಗಾಂಧಿ, ಸೋನಿಯಾ ಗಾಂಧಿಯಾದಿಯಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಹ ಮಹಿಳೆಯರಿಗೆ ಅಧಿಕಾರ ನೀಡುವ ಮೂಲಕ ಗೌರವಿಸುತ್ತಿದೆ ಎಂದರು.
ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಆರೋಗ್ಯ ಸಚಿವ ಡಾ.ಸುಧಾರಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ. ಪಕ್ಷದ ಜಿಲ್ಲೆಯವರಾದ ಡಾ.ಸುಧಾಕರ್ ಅವರು ನಮ್ಮ ಮನವಿ ಸ್ಪಂದಿಸಲಿದ್ದು, ಈ ಮೂಲಕ ಶಾಸಕ ಟಿ.ವೆಂಕಟರಮಣಯ್ಯ ಅವರ ಪ್ರಯತ್ನಕ್ಕೆ ನೆರವು ನೀಡಲಾಗುವುದೆಂದರು.
ನೂತನವಾಗಿ ಅಧಿಕಾರವಹಿಸಿಕೊಂಡ ಕನ್ಯಾಕುಮಾರಿ ಶ್ರೀನಿವಾಸ್ ಅವರನ್ನು ಮಾಜಿ ಸಚಿವ ಕೃಷ್ಣಭೈರೇಗೌಡ, ಶಾಸಕರಾದ ಟಿ.ವೆಂಕಟರಮಣಯ್ಯ, ಶರತ್ ಬಚ್ಚೆಗೌಡ, ಡಿಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಲೋಹಿತ್,ವಿದ್ಯಾರ್ಥಿ ಘಟಕ ಅಧ್ಯಕ್ಷ ಅಶ್ವಥ್ ರೆಡ್ಡಿ, ಮುಖಂಡರಾದ ಜನಾರ್ಧನ್, ಕಿರಣ್ ಮತ್ತಿತರು ಅಭಿನಂದನೆ ಸಲ್ಲಿಸಿದರು.
ಮುಂದಿನ 7 ತಿಂಗಳ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರು ಆಯ್ಕೆಯಾಗುವವರೆಗೂ ಕನ್ಯಾಕುಮಾರಿ ಶ್ರೀನಿವಾಸ್ ಅಧಿಕಾರದಲ್ಲಿರಲ್ಲಿದ್ದಾರೆ.

