ದೊಡ್ಡಬಳ್ಳಾಪುರ: ಕೋವಿಡ್-19 ಹಿನ್ನಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಶಾಲಾ ಮಕ್ಕಳ ಅನುಪಸ್ಥಿತಿಯಲ್ಲಿ, ಸಾರ್ವಜನಿಕರ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಭಾಗವಹಿಸುವಿಕೆಯೊಂದಿಗೆ ಸರ್ಕಾರದ ಸೂಚನೆಯಂತೆ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಹಾಗೂ ರ್ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಟಿ.ಎಸ್.ಶಿವರಾಜ್ ತಿಳಿಸಿದರು.
ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಇಲಾಖೆಗಳ ಮುಖ್ಯಸ್ಥರೊಂದಿಗೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಎಂದಿನಂತೆ ರಾಜ್ಯೋತ್ಸವವನ್ನು ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದಾಗ, ಶಾಲಾ ಮಕ್ಕಳಿಲ್ಲದೇ ಸೀಮಿತ ಜನರು ಭಾಗವಹಿಸುವುದರಿಂದ ಕ್ರೀಡಾಂಗಣದಲ್ಲಿ ಬೇಡ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ಈ ಹಿನ್ನಲೆಯಲ್ಲಿ ಮೆರವಣಿಗೆ ಇಲ್ಲದೇ ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ಪುರಭವನದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆ ಸೇರಿದಂತೆ ಕನ್ನಡ ಗೀತೆಗಳ ಗಾಯನ ಹಾಗೂ ಶಿಷ್ಟಾಚಾರದಂತೆ ಕಾರ್ಯಕ್ರಮವನ್ನು ರೂಪಿಸಲು ತೀರ್ಮಾನಿಸಲಾಯಿತು.
ಡಾ.ವೆಂಕಟರೆಡ್ಡಿ ಹೆಸರಿನಲ್ಲಿ ಕನ್ನಡ ಕಟ್ಟಾಳು ಪ್ರಶಸ್ತಿ: ಪ್ರತಿವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಹಾಗೂ ಕನ್ನಡ ನಾಡು ನುಡಿಗಾಗಿ ಹೋರಾಟ ನಡೆಸಿದವರಿಗೆ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ನೀಡಬೇಕೆಂದು ಸಭೆಯಲ್ಲಿ ಹಾಜರಿದ್ದ ಕನ್ನಡಪರ ಸಂಘಟನೆಗಳ ಮುಖಂಡರು ಸಲಹೆ ನೀಡಿದರು. ಆದರೆ ಈ ಬಾರಿ ಚುನಾವಣೆ ನೀತಿ ಸಂಹಿತೆ ಇದ್ದುದರರಿಂದ ಮುಂಚಿತವಾಗಿ ಸಭೆ ಕರೆಯಲು ಸಾಧ್ಯವಾಗಲಿಲ್ಲ. ಇನ್ನು ಮೂರು ದಿನಗಳಲ್ಲಿ ಅರ್ಜಿ ಪಡೆದು ಸನ್ಮಾನಿತರನ್ನು ಆಯ್ಕೆ ಮಾಡುವುದು ಸಹ ಕಷ್ಟಕರ. ಹೀಗಾಗಿ ಸಭೆಯಲ್ಲಿಯೇ ಸನ್ಮಾನಿತರನ್ನು ಸೂಚಿಸಿ ಎಂದು ತಹಶಿಲ್ದಾರರು ಪ್ರಸ್ತಾಪಿಸಿದಾಗ, ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ಈ ವರ್ಷದಿಂದ ರೈತ ಹಾಗೂ ಕನ್ನಡಪರ ಹೋರಾಟಗಾರ ಡಾ.ವೆಂಕಟ ರೆಡ್ಡಿ ಹೆಸರಿನಲ್ಲಿ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ಹಿರಿಯ ಕನ್ನಡಪರ ಹೋರಾಟಗಾರರಾದ ಟಿ.ಎನ್.ಪ್ರಭುದೇವ್, ಎಂ.ಸಂಜೀವ್ ನಾಯಕ್ ಹಾಗೂ ಜಿ.ಸತ್ಯನಾರಾಯಣ ಅವರಿಗೆ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾತು. ಕನ್ನಡ ಮಾಧ್ಯಮದಲ್ಲಿ ಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ತಿಳಿಸಿದರು.
ಕಾರ್ಯಕ್ರಮ ಸರಳ ಆಚರಣೆ ಎಂದು ಕಾಟಾಚಾರವಾಗವುದು ಬೇಡ. ಸಭಾ ಗೌರವಕ್ಕೆ ದಕ್ಕೆಯಾಗಬಾರದು ಹಾಗೂ ಸನ್ಮಾನಿತರಿಗೆ ಸಿಗಬೇಕಾದ ಮನ್ನಣೆ ಸಿಗಬೇಕು ಎಂದು ಸಭೆಯಲ್ಲಿದ್ದ ಮುಖಂಡರು ಅಭಿಪ್ರಾಯ ಪಟ್ಟರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ, ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್, ನಗರಸಭೆ ಪರಿಸರ ಅಧಿಕಾರಿ ಈರಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

