ದೊಡ್ದಬಳ್ಳಾಪುರ: ನಗರದ ಎಂ.ಎಸ್.ವಿ ಪಬ್ಲಿಕ್ ಶಾಲೆಯಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಹಾಗೂ ಇತ್ತೀಚೆಗೆ ಅಗಲಿದ ಸುಪ್ರಸಿದ್ಧ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ರವರ ನೆನಪಿಗಾಗಿ ಗೀತ ನಮನ ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ನಾಗರತ್ನ ಎನ್.ಪಾಲನ್ ಮಾತನಾಡಿ,ಕರ್ನಾಟಕ ಎಂದರೆ ಕೇವಲ ರಾಜ್ಯವಲ್ಲ ಅದು ವಿವಿಧ ಸಂಸ್ಕೃತಿಗಳ ಸಾಗರ, ಕನ್ನಡ ಎಂದರೆ ಕೇವಲ ಭಾಷೆಯಲ್ಲ, ಅದು ನಮ್ಮೆಲ್ಲರ ಆತ್ಮಾಭಿಮಾನ. ಭಾಷಾ ಕಲಿಕೆ ಬಹಳ ಮುಖ್ಯ, ಮಕ್ಕಳಲ್ಲಿ ಭಾಷಾ ಕಲಿಕೆಯ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸುವ ಅಗತ್ಯತೆ ಮತ್ತು ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಹಾಗೂ ಪೋಷಕರಿಗೆ ಇರಬೇಕು. ಇಂದಿನ ಜಾಗತಿಕ ಸವಾಲನ್ನು ಎದುರಿಸಲು ಶಿಕ್ಷಣದಲ್ಲಿ ಆಂಗ್ಲ ಭಾಷೆಯ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಕನ್ನಡ ನಾಡು,ನುಡಿಯನ್ನು ಮರೆಯಬಾರದು ಅದನ್ನು ಉಳಿಸಿಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ಶಾಲಾ ಸಂಸ್ಥಾಪಕ ಸುಬ್ರಮಣ್ಯ ಮಾತನಾಡಿ, ರಾಜ್ಯೋತ್ಸವ ಕೇವಲ ನವೆಂಬರ್ 1ರ ಸಡಗರವಾಗಬಾರದು, ಪ್ರತಿ ದಿನ ಪ್ರತಿ ಘಳಿಗೆ ನಮ್ಮ ತನವ ನಾವು ಬಿಡಬಾರದು, ಎಲ್ಲಾ ಭಾಷೆಗೂ ಗೌರವ ನೀಡುತ್ತಾ ನಮ್ಮ ಭಾಷೆಯನ್ನು ಉಳಿಸಿ ಬೆಳೆಸೋಣ ನಮ್ಮ ರಾಜ್ಯ ಇಂದು ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆಯುತ್ತಿದೆ. ಈ ರಾಜ್ಯದಲ್ಲಿ ಜನಿಸಿರುವ ನಾವೆಲ್ಲರೂ ಧನ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿವರ್ಗ ಹಾಜರಿದ್ದರು.

