ದೊಡ್ಡಬಳ್ಳಾಪುರ: ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಯೋಜನೆ ರೂಪಿಸಬೇಕಾದ ಸರ್ಕಾರಗಳು ಆಂಗ್ಲ ಮಾದ್ಯಮ ಶಾಲೆಗೆ ಅನುಮತಿ ನೀಡಿ ಅದನ್ನು ಬೆಳಸುವ ಮೂಲಕ ಕನ್ನಡ ಭಾಷೆಯನ್ನು ಬರಿ ಮಾತಿಗೆ ಸೀಮಿತಗೊಳಿಸಿರುವುದು ನೋವಿನ ಸಂಗತಿ ಎಂದು ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ರವಿ ಮಾವಿನಕುಂಟೆ ಹೇಳಿದರು.
ತಾಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯಕ್ತ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂಗ್ಲಿಷ್ ಕಲಿತರೆ ಮಾತ್ರ ವೈಭವ ಜೀವನ ನಡೆಸಬಹುದೆಂದು ಮಾತೃ ಭಾಷೆಯನ್ನು ಕಡೆಗಣಿಸುತ್ತಿರುವುದನ್ನು ನೋಡಬಹುದು. ಕೇವಲ ನವೆಂಬರ್ನಲ್ಲಿ ಮಾತ್ರ ಕನ್ನಡ ಕಾರ್ಯಕ್ರಮ ಮಾಡದೆ ವರ್ಷ ಪೂರ್ತಿ ಕನ್ನಡದ ಕಾರ್ಯಕ್ರಮಗಳಾಗಬೇಕು. ಅಭಿವೃದ್ಧಿ ಪರಿವರ್ತನೆ ಎಂಬುದು ಬರಿ ಶ್ರೀಮಂತರ ಹಾಗೂ ಬಂಡವಾಳ ಶಾಹಿಗಳಿಗೆ ಮಾತ್ರ ಸೀಮಿತವಾಗಿದೆ. ಸರ್ವರಿಗೂ ಸಮಪಾಲ ಎಂಬುದು ಬರಿ ಪುಸ್ತಕದಲ್ಲಿದರೆ ಸಾಲದು ಅದು ಕಾರ್ಯಗತವಾದರೆ ಎಲ್ಲರೂ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು. ದರ್ಗಾಜೋಗಿಹಳ್ಳಿ ಮಲ್ಲೇಶ್ ಅವರು ಲಾಕ್ಡೌನ್ ಆರಂಭದಿಂದ ನಿರಂತರವಾಗಿ ಅನ್ನ ದಾಸೋಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅನ್ನದಾಸೋಹಿ ದರ್ಗಾಜೋಗಿಹಳ್ಳಿ ಮಲ್ಲೇಶ್ ಮಾತನಾಡಿ ಆರಂಭದಲ್ಲಿ ಸಮಸ್ಯೆಯಾಗಿದ್ದು ಈಗ ದಾನಿಗಳ ನೆರವಿನಿಂದ ನಿರಂತರವಾಗಿ 217 ನೇ ದಿನಕ್ಕೆ ಅನ್ನದಾಸೋಹ ಕಾಲಿಟ್ಟಿದೆ. ಪ್ರತಿ ದಿನ 300 ಜನರಿಗೆ ಅನ್ನದಾಸದೋಹ ಕಲ್ಪಿಸಲಾಗುತ್ತಿದೆ ಎಂದರು.
ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಜಿಲ್ಲಾ ಗೌರವಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ರಮೇಶ್, ತಾಲೂಕು ಅಧ್ಯಕ್ಷ ಅಶೋಕ್, ಕಾರ್ಮಿಕ ಘಟಕ ಅಧ್ಯಕ್ಷ ಆನಂದ್, ಕಾರ್ಯಾಧ್ಯಕ್ಷ ನವೀನ್, ಗೌರವ ಅಧ್ಯಕ್ಷ ನಾಗರಾಜ್ ನಾಯಕ್, ಶ್ರೀನಿವಾಸ್, ಯಮನೂರು, ಶಿವು, ವಿಠ್ಠಲ್ ಅಶೋಕ್,ಪ್ರಕಾಶ್, ಹೇಮಂತ್, ಶಂಭುಲಿಂಗಯ್ಯ ಇದ್ದರು.

