ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಕಾಡಿಗೆ ಹೊಂದಿಕೊಂಡಂತಿರುವ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಒಂದೇ ದಿನ ಕರು ಹಾಗೂ ಮೇಕೆಯ ಮೇಲೆ ದಾಳಿ ಮಾಡಿರುವ ಚಿರತೆ ಅವುಗಳನ್ನು ಕೊಂದುಹಾಕಿದೆ.
ಲಕ್ಷ್ಮಿನಾರಾಯಣಪ್ಪ ಎನ್ನುವವರು ಮೇಕೆಯನ್ನು ಮೇಯಿಸಲು ಗ್ರಾಮದ ಕೂಗಳೆತೆ ದೊರಕ್ಕೆ ತೆರಳಿದಾಗ ಸದ್ದಿಲ್ಲದೆ ಬಂದ ಚಿರತೆ ಸುಮಾರು 10ಸಾವಿರ ಮೌಲ್ಯದ ಮೇಕೆಯನ್ನು ಎಳೆದೊಯ್ದು ಭಕ್ಷಿಸಿದ್ದರೆ, ರಾಮಕೃಷ್ಣಪ್ಪ ಎನ್ನುವವರ ಸುಮಾರು 8 ಸಾವಿರ ಮೌಲ್ಯದ ಸೀಮೆ ಕರುವನ್ನು ಸಹ ಬಲಿಪಡೆದಿದೆ. ಸೋಮವಾರದಂದು ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದ್ದು ರಾತ್ರಿ ಬೆಳಕಿಗೆ ಬಂದಿದೆ.
ಹಲವು ತಿಂಗಳುಗಳ ಹಿಂದೆ ಈ ರೀತಿ ಘಟನೆ ನಡೆದಿದ್ದು. ಮತ್ತೆ ಅದೇ ರೀತಿ ಒಂದೇ ದಿನ ಎರಡು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೆ ಅರಣ್ಯ ಇಲಾಖೆ ಚಿರತೆ ಹಿಡಿಯಲು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

