ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ವತಿಯಿಂದ ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಲ್.ಆರ್.ನಳಿನಾಕ್ಷಿ ಮಾತನಾಡಿ, ಅಂಗನವಾಡಿ ನೌಕರರಿಗೆ ಕನಿಷ್ಠ 21 ಸಾವಿರ ವೇತನ ಹೆಚ್ಚಿಸುವುದು, ಖಾಯಂಗೊಳಿಸುವುದು,10 ಸಾವಿರ ನಿವೃತ್ತ ವೇತನ ನೀಡುವುದು, 2020ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸುವುದು ಸೇರಿದಂತೆ 17 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುತ್ತಿದೆ. ಆದರೆ ಸರ್ಕಾರಗಳು ಇದನ್ನು ಪರಿಗಣಿಸುತ್ತಿಲ್ಲ, ಈ ಹಿನ್ನೆಲೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಕಿಯರ ಒಕ್ಕೂಟ (ಸಿಐಟಿಯು) ಕರೆಯ ಮೇರೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನ.26ರಂದು ದೇಶಾದ್ಯಂತ ಅಖಿಲ ಭಾರತ ಮುಷ್ಕರ ನಡೆಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಾಂಕೇತಿಕ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಸಮಿತಿ ಖಜಾಂಚಿ ಕಲಾವತಿ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷೆ ಟಿ.ಡಿ.ಮಂಜುಳ, ಕಾರ್ಯದರ್ಶಿ ಸುಮ, ಖಜಾಂಚಿ ನಿರ್ಮಲ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷೆ ಪುಷ್ಪಾವತಮ್ಮ, ಕಾರ್ಯದರ್ಶಿ ಅನುಸೂಯ, ಹೊಸಕೋಟೆ ತಾಲೂಕು ಅಧ್ಯಕ್ಷೆ ಕಲಾವತಿ, ಕಾರ್ಯದರ್ಶಿ ಶಾರದಾ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

