ಬೆಂಗಳೂರು: ಜಲ ಜೀವನ ಮಿಷನ್ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಕ್ಟೋಬರ್ 02 ರಿಂದ 100 ದಿನಗಳ (ಜನವರಿ 2021 ಮೊದಲ ವಾರದ) ಒಳಗಾಗಿ ಪ್ರತಿ ಗ್ರಾಮದ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳು, ವಸತಿ ಮತ್ತು ಆಶ್ರಮ ಶಾಲೆಗಳಿಗೆ ಕೊಳವೆ ನೀರು ಸಂಪರ್ಕ ಕಲ್ಪಿಸುವುದಕ್ಕಾಗಿ ವಿಶೇಷ ಆಂದೋಲನ ಹಮ್ಮಿಕೊಳ್ಳವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ನಡೆದ “ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಮತ್ತು ಜಲ ಜೀವನ್ ಮಿಷನ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ” ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲಾ ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳು ಹಾಗೂ ವಸತಿ ಮತ್ತು ಆಶ್ರಮ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು, ಅಡುಗೆ ತಯಾರಿಸಲು, ಕೈತೊಳೆಯಲು ಹಾಗೂ ಶೌಚಾಲಯ ಬಳಕೆಗಾಗಿ ಅಗತ್ಯ ನೀರು ದೊರಕುವಂತೆ ಮಾಡಲು ಯೋಜನೆ ರೂಪಿಸಿ ಎಂದರಲ್ಲದೆ, ಅದರಂತೆ ನಿಗದಿತ ಅವಧಿಯ ಒಳಗೆ ಗುರಿ ಸಾಧಿಸುವಂತೆ ತಿಳಿಸಿದರು.
ಪ್ರತಿ ಗ್ರಾಮ ಪಂಚಾಯತಿ ಸೂಚನಾ ಫಲಕದಲ್ಲಿ ಪರಿಹಾರ ಸಹಾಯವಾಣಿ ಸಂಖ್ಯೆ: 9480985555 ಅನ್ನು ಪ್ರದರ್ಶಿಸುವಂತೆ ತಿಳಿಸಿದರು. ನಿರ್ಮಾಣ ಹಂತದಲ್ಲಿರುವ ಸ್ವಚ್ಛ ಸಂಕೀರ್ಣ ಘಟಕಗಳನ್ನು ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳಿಸಲು ತಿಳಿಸಿದರು.
ನರೇಗಾ ಯೋಜನೆಯಡಿಯಲ್ಲಿ ಮಳೆನೀರು, ಕೊಯ್ಲು, ಕೆರೆ, ಕುಂಟೆ, ಸೊಕ್ ಪಿಟ್, ಕಿಚನ್ ಗಾರ್ಡನ್, ಸಸಿ ನೆಡುವ ಕಾರ್ಯಕ್ರಮಗಳನ್ನು ಹಾಗೂ ಸ್ವಚ್ಛ ಸಂಕೀರ್ಣ ಘಟಕಗಳಿಗೆ ಕಾಂಪೌಂಡ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ಹೊಸಕೋಟೆ ಮತ್ತು ದೇವನಹಳ್ಳಿ ತಾಲ್ಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಭಿಯಂತರರು, ಎಸ್ಬಿಎಂ-ಜಿ ಸಮಾಲೋಚಕರು ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

