ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ಬೆಂಗಳೂರಿನ ಕೆಂಗೇರಿ, ಚಿಕ್ಕಜಾಲ ಸೇರಿದಂತೆ ಹಲವಾರು ಕಡೆ 138 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿರುವ ಆರೋಪದ ಮೇಲೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಸಿಮಂತ್ ಕುಮಾರ್ ಸಿಂಗ್ ಹೇಳಿದ್ದರು.
ನಕಲಿ ದಾಖಲೆ ಸೃಷ್ಠಿಸಿ ಭೂಮಿ ಮಾರಾಟ ಪ್ರಕರಣ ಕುರಿತು ಅವರು ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ನಕಲಿ ದಾಖಲೆ ಸೃಷ್ಠಿಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಗಳಾದ ಪ್ರಸನ್ನಕುಮಾರ್,ಬಸವರಾಜು,ಉಮೇಶ್, ಜಯಲಕ್ಷ್ಮಮ್ಮ ಅವರನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ ಆರೋಪಿಗಳ ವಿರುದ್ಧ 6 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಒಂದು ದೂರನ್ನು ದೊಡ್ಡಬಳ್ಳಾಪುರ ಉಪ ನೊಂದಣಾಧಿಕಾರಿಗಳು ನೀಡಿದ್ದಾರೆ ಎಂದರು.
ಸುಮಾರು ರೂ100 ಕೋಟಿ ಬೆಲೆ ಬಾಳುವ ಭೂಮಿಗೆ ದಾಖಲೆಗಳನ್ನು ಸೃಷ್ಠಿಸಿರುವುದು ಇಲ್ಲಿಯವರೆಗಿನ ತನಿಖೆಯಿಂದ ಬೆಳಕಿಗೆ ಬಂದಿದೆ. ಇದೊಂದು ಗಂಭೀರ ಪ್ರಕರಣ ಎಂದು ಈಗಾಗಲೇ ಪರಿಹಗಣಿಸಲಾಗಿದೆ. ನಕಲಿ ದಾಖಲೆ ಸೃಷ್ಠಿಸಲು ಎಲ್ಲಿ ಲೋಪವಾಗಿದೆ ಎನ್ನುವುದರ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗುವುದು. ಈ ಪ್ರಕರಣದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿ ಸೇರಿದಂತೆ ಹಲವಾರು ಜನ ಭಾಗಿಯಾಗಿದ್ದಾರೆ. ಇಲ್ಲಿಯವರೆಗಿನ ತನಿಖೆಯಲ್ಲಿ ದಾಖಲೆಗಳನ್ನು ಮಾತ್ರ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ನಕಲಿ ದಾಖಲೆಗಳು ಯಾರಿಗೆ ಸೇರಿವೆ ಎನ್ನುವುದರ ಆಧಾರದ ಮೇಲೆ ಮತ್ತಷ್ಟು ಜನರ ವಿರುದ್ದ ದೂರು ದಾಖಲಿಸಿಕೊಂಡು ಬಂಧಿಸಲಾಗುವುದು ಎಂದರು.
ವಿಶೇಷ ತಂಡ ರಚನೆ: ಇಡೀ ರಾಜ್ಯದಲ್ಲಿಯೇ ಇದೊಂದು ವಿಶೇಷ ಪ್ರಕರಣವಾಗಿದೆ. ಹೀಗಾಗಿ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುವುದು. ಇಲ್ಲಿಯವರೆಗಿನ ತನಿಖೆಯ ಪ್ರತಿ ಹಂತವನ್ನು ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಸರ್ಕಾರಿ ಅಧಿಕಾರಿಗಳ ಸಮಕ್ಷಮದಲ್ಲೇ ಪಂಚನಾಮೆ (ಮಹಜರ್) ನಡೆಸಿ ಸಹಿ ಪಡೆಯಲಾಗಿದೆ. ವಂಚನೆಗೆ ಒಳಗಾಗಿರುವ ಭೂಮಿಯ ಮಾಲೀಕರು ಪೊಲೀಸರಿಗೆ ದೂರು ನೀಡಬಹುದಾಗಿದೆ ಎಂದರು.
ನಕಲಿ ದಾಖಲೆಗಳ ಸಿದ್ದಪಡಿಸಲು ಬಳಸಲಾಗುತ್ತಿದ್ದ ಕಂಪ್ಯೂಟರ್, ಸ್ಟಾಂಪ್ ಪ್ಯಾಡ್, ಹಳೆಯ ಕೈ ಟೈಪಿಂಗ್ ಯಂತ್ರ ಹಾಗೂ ದಾಖಲೆ ಪತ್ರಗಳನ್ನು ಪ್ರದರ್ಶಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ , ಸಬ್ಇನ್ಸ್ಪೆಕ್ಟರ್ ಗಜೇಂದ್ರ, ಸೋಮಶೇಖರ್ ಇದ್ದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

