ಮುಂಬೈ: ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ಕಚೇರಿಗೆ ಮರಳಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ವೇಳೆ ಏನೆಂದು ಪ್ರತಿಜ್ಞೆ ಮಾಡಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ. ನಾನು ನಿಮ್ಮ ಈ ಕೃತ್ಯದಿಂದ ಎದೆಗುಂದುವುದಿಲ್ಲ. ಇದರಿಂದ ಮತ್ತಷ್ಟು ಬಲಗೊಂಡಿದ್ದೇನೆ. ನಮಗೆ ದೇಶ ಮುಖ್ಯ. ಇದರಲ್ಲಿ ಯಾವ ರಾಜಿಯೂ ಆಗುವುದಿಲ್ಲ ಎಂದರು.
ಯಾವುದೇ ಶಕ್ತಿಯು ರಿಪಬ್ಲಿಕ್ ನೆಟ್ವರ್ಕ್‌ಅನ್ನು ಮುಗಿಸಲು ಸಾಧ್ಯವಿಲ್ಲ. ನಾವು ಇನ್ನು ಮುಂದಿನ ಕೆಲವೆ ತಿಂಗಳಲ್ಲಿ ಭಾರತದ ಪ್ರತಿ ಭಾಷೆಯಲ್ಲಿಯೂ ಸುದ್ದಿ ವಾಹಿನಿಯಲ್ಲಿ ಆರಂಭಿಸಲಿದ್ದೇವೆ. ಅಂತಾರಾಷ್ಟ್ರೀಯ ನೆಟ್ವರ್ಕ್ ಬೆಳೆಸಲಿದ್ದೇವೆ. ಉದ್ಧವ್ ಠಾಕ್ರೆ, ನಿಮಗೆ ಸಾಧ್ಯವಾದರೆ ತಡೆಯಿರಿ. ಜೈಲಿಗೆ ಇನ್ನೊಮ್ಮೆ ಕಳಿಸಿ. ಅಲ್ಲಿಯೇ ಚಾನೆಲ್ ಲಾಂಜ್ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಆಟ ಈಗಿನ್ನೂ ಶುರುವಾಗಿದೆ. ಇದು ಭಾರತದ ಜನರ ವಿಜಯ. ನಾನು ಸುಪ್ರೀಂಕೋರ್ಟ್‌ಗೆ ಆಭಾರಿಯಾಗಿರುತ್ತೇನೆ ಎಂದ ಅರ್ನಬ್, ಮಹಾರಾಷ್ಟ್ರದ ಜನತೆ ನನ್ನೊಂದಿಗೆ ಇದ್ದಾರೆ, ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿದರು.
ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ತನೋಜಾ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಜೈಲಿನ ಹೊರಗೆ ನೆರೆದಿದ್ದ ಜನರ ಕಡೆಗೆ ಕೈಬೀಸಿದ ಅರ್ನಬ್, ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

