ಬೆಂಗಳೂರು: ಕೋವಿಡ್-19 ವೈರಸ್‌ನ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ/ ಮುಂಜಾಗೃತಾ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಶ್ರವ್ಯ ಮತ್ತು ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್.ಇ.ಡಿ. ಪರದೆ ಹೊಂದಿರುವ ಮೊಬೈಲ್ ವಾಹನದ ಮೂಲಕ ಪ್ರಚಾರ ಕಾರ್ಯಕ್ರಮಕ್ಕೆ ಇಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕೋವಿಡ್-19 ತಡೆಗಟ್ಟುವಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಸುರಕ್ಷತಾ ಮುಂಜಾಗೃತಾ ಕ್ರಮಗಳ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು ಶ್ರವ್ಯ-ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್.ಇ.ಡಿ ಪರದೆ ಹೊಂದಿರುವ ಮೊಬೈಲ್ ವಾಹನಗಳನ್ನು ಬಳಸಿಕೊಂಡು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ನಡೆಸುತ್ತಿರುವ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ಸರ್ಕಾರವು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಎಲ್.ಇ.ಡಿ ವಾಹನಗಳಿಂದ ಕೋವಿಡ್-19 ಕುರಿತ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿನ 105 ಗ್ರಾಮ ಪಂಚಾಯತಿ ವ್ಯಾಪ್ತಿಯ 180 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ ತಲಾ 45 ಗ್ರಾಮಗಳಂತೆ, ಪ್ರತಿ ಗ್ರಾಮ ಪಂಚಾಯತಿಯಲ್ಲಿ 2 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರತಿ ಗ್ರಾಮ ಪಂಚಾಯತಿಗಳ ತಲಾ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಪ್ರತಿದಿನ 10 ಗ್ರಾಮಗಳಲ್ಲಿ ಕೋವಿಡ್-19 ಕುರಿತು ಜಾಗೃತಿ ಮೂಡಿಸಲಾಗುವುದು.18 ದಿನಗಳ ಜಾಗೃತಿ ಕಾರ್ಯಕ್ರಮ ಇದಾಗಿದ್ದು, ಜಿಲ್ಲೆಯಲ್ಲಿ 2 ಎಲ್.ಇ.ಡಿ ವಾಹನಗಳ ಸಂಚರಿಸಲಿದ್ದು, ಪ್ರತಿದಿನ ತಲಾ 5 ಗ್ರಾಮಗಳಂತೆ ಎರಡು ವಾಹನಗಳಿಂದ 10 ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕನ್ಯಾಕುಮಾರಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಮಣಯ್ಯ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರವಿ.ಡಿ.ಚನ್ನಣ್ಣನವರ್, ಜಿ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎನ್.ಎಂ.ನಾಗರಾಜು, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಎನ್.ಎಸ್.ಮಹೇಶ್, ಸಹಾಯಕ ನಿರ್ದೇಶಕಿ ಹೇಮಾವತಿ.ಜೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್, ಟ್ವಿಟರ್ ಲೈಕ್ ಮಾಡಿ, ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ