ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವಾಗ, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಗತಿ ಸಾಧಿಸಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ 2020-21ನೇ ಸಾಲಿನ ಅಕ್ಟೋಬರ್-2020ರ ಮಾಹೆಯ ಅಂತ್ಯದವರೆಗಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಕೆರೆಗಳ ಅಂಗಳದಲ್ಲಿ ಬೆಳೆದಿರುವ ಜಾಲಿ ಮರಗಳನ್ನು ಬುಡ ಸಮೇತ ತೆರವುಗೊಳಿಸಿ ಎಂದರಲ್ಲದೆ, ಜಿಲ್ಲೆಯಲ್ಲಿ ನೀಲಗಿರಿ ಮರಗಳಿಂದಾಗಿ ಅಂತರ್ಜಲ ಸಮಸ್ಯೆ ಹೆಚ್ಚಾಗುತ್ತಿದ್ದು, ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳಿಂದ ನೀಲಗಿರಿ ತೆರವಿಗೆ ಪ್ರಸ್ತಾವನೆಗಳು ಬಂದಲ್ಲಿ ಕ್ರಮವಹಿಸಿ ಎಂದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿನ ಮಳೆ-ಬೆಳೆ ಕುರಿತು ಕೃಷಿ ಇಲಾಖೆಯವರಿಗೆ ಮಾಹಿತಿ ಕೇಳಿದಾಗ ಜಂಟಿ ಕೃಷಿ ನಿರ್ದೇಶಕರು ಮಾತನಾಡಿ ಉತ್ತಮ ಮಳೆಯಾಗಿದ್ದು, ಶೇ. 98% ರಷ್ಟು ಬಿತ್ತನೆಯಾಗಿದೆ ಎಂದರಲ್ಲದೆ, ಸೈಕ್ಲೋನ್ ಪ್ರಭಾವದಿಂದಾಗಿ ಕೆಲವೆಡೆ ಬೆಳೆಗಳು ನೆಲಕಚ್ಚಿವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನದಿಮೂಲ ಇಲ್ಲದಿರುವ ಕಾರಣ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ ಕೊರೆಸಿ, ಪೈಪ್ ಲೈನ್ ಗೆ ಎಸ್‌ಡಿಆರ್‌ಎಫ್ ಮೂಲಕ ಅನುದಾನ ಒದಗಿಸಲು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸಚಿವರಿಗೆ ಕೋರಿದಾಗ ಎಲ್ಲರೂ ಸಹಕಾರದಿಂದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
2019-20 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದರಲ್ಲದೆ, ಪದವಿ ತರಗತಿಗಳು ಆರಂಭವಾಗಿದ್ದು, ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ತರಗತಿ ನಡೆಸಲು ತಿಳಿಸಿದರು.ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಾಗಿದ್ದು, ಮಹಿಳೆ ಮತ್ತು ಮಕ್ಕಳಿಗೆ ಅಗತ್ಯ ರಕ್ಷಣೆಗೆ ಕ್ರಮ ವಹಿಸಲು ಸೂಚಿಸಿದರಲ್ಲದೆ, ಹೆಣ್ಣು ಮಕ್ಕಳ ರಕ್ಷಣೆ ಕುರಿತ ಯೋಜನೆಗಳ ಮಾಹಿತಿಯುಳ್ಳ ಕರಪತ್ರ, ಗೋಡೆಬರಹ, ಮಕ್ಕಳ ಸಹಾಯವಾಣಿ-1098 ಕುರಿತು ಜಾಗೃತಿ ಮೂಡಿಸಲು ತಿಳಿಸಿದರು.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಅಂಟಿರುವ ಚರ್ಮಗಂಟು ರೋಗದ ನಿರ್ವಹಣೆ ಕುರಿತು ಮಾಹಿತಿ ಕೇಳಿದಾಗ ಪಶುಪಾಲನಾ ಇಲಾಖೆಯವರು ಮಾತನಾಡಿ ಚರ್ಮಗಂಟು ರೋಗವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದರಲ್ಲದೆ, 26 ವಾರಗಳಿಗೆ ಸಾಕಾಗುವಷ್ಟು ಮೇವು, ನೀರಿನ ಲಭ್ಯತೆ ಇರುವುದಾಗಿ ಮಾಹಿತಿ ಈ ನೀಡಿದರು. ಈ ವೇಳೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರು ಮಾತನಾಡಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಮೊಬೈಲ್ ವೆಟರ್ನಿಟಿ ಕ್ಲಿನಿಕ್‌ಗಳ ಸೇವೆ ಸಕಾಲದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇನ್ನು ಮುಂದೆ ಪಿಂಚಣಿಗೆ ಅರ್ಜಿ ಹಾಕಿ ಅಲೆದಾಡುವಂತಿಲ್ಲ. ಬದಲಿಗೆ, ಉಡುಪಿ, ಬಳ್ಳಾರಿ ಮಾದರಿಯಲ್ಲಿ ತಹಶೀಲ್ದಾರ್ ಮೂಲಕ ಫಲಾನುಭವಿಗಳಾಗಲು ಅರ್ಹರಿರುವ ಪಿಂಚಣಿದಾರರಿಗೆ ಆಯ್ಕೆ ಪತ್ರಗಳನ್ನು ಮನೆಗಳಿಗೆ ಕಳುಹಿಸುವ ಮೂಲಕ ಸೌಲಭ್ಯಗಳು ಮನೆಗೆ ತಲುಪುವಂತೆ ಮಾಡಲಾಗುವುದು ಎಂದರಲ್ಲದೆ, ಜಿಲ್ಲೆಯಲ್ಲಿ ಆಸ್ಪತ್ರೆ, ಶಾಲೆ, ಸ್ಮಶಾನದಂತಹ ಸಾರ್ವಜನಿಕ ಉಪಯುಕ್ತ ಕಟ್ಟಡಗಳ ನಿರ್ಮಾಣದ ನಂತರ ಉಳಿದ ಜಮೀನನ್ನು ಸಾಗುವಳಿಗೆ ನೀಡಲು ಸೂಚಿಸಿದರಲ್ಲದೆ, ತಾಲ್ಲೂಕುವಾರು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಶಾಸಕರು ಎಂ.ಎಲ್.ಎ. ಅನುದಾನ ನೀಡುವ ಮೂಲಕ ಕೈಜೋಡಿಸಲು ಹೇಳಿದರು.
ದೆಹಲಿ ಹಾಗೂ ಹೊರ ದೇಶಗಳಲ್ಲಿ ಕೋವಿಡ್-19 ಎರಡನೇ ಅಲೆ ಆರಂಭವಾಗಿದ್ದು, ಜಿಲ್ಲಾದ್ಯಂತ ಆಸ್ಪತ್ರೆಗಳಲ್ಲಿ ನಿರ್ವಹಣೆ, ಸೌಲಭ್ಯಗಳ ಕುರಿತು ಪರಿಶೀಲಿಸಲು ಹೇಳಿದರಲ್ಲದೆ, ನೆಲಮಂಗಲ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ತಿಳಿಸಿದರು.
ಆ್ಯಂಬುಲೆನ್ಸ್ ಹಾಗೂ ಶ್ರದ್ಧಾಂಜಲಿ ವಾಹನಗಳ ಸ್ಥಿತಿಗತಿಯನ್ನು ಆಗಾಗ ಪರೀಶೀಲಿಸಬೇಕು ಹಾಗೂ ಕೋವಿಡ್-19 ಕುರಿತು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕನ್ಯಾಕುಮಾರಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಎಂ.ನಾಗರಾಜ, ಉಪ ಕಾರ್ಯದರ್ಶಿ ಕರಿಯಪ್ಪ, ಮುಖ್ಯ ಯೋಜನಾಧಿಕಾರಿ ವಿನುತಾರಾಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹರಿತಲೇಖನಿ ಫೇಸ್ಬುಕ್, ಟ್ವಿಟರ್ ಲೈಕ್ ಮಾಡಿ, ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ