ಬೆಂ.ಗ್ರಾ.ಜಿಲ್ಲೆ: ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ವಾರದಲ್ಲಿ ಮೂರು ದಿನ ವೈದ್ಯರ ತಂಡ ಹಳ್ಳಿಗಳಿಗೆ ತೆರಳಿ, ಆರೋಗ್ಯ ತಪಾಸಣೆ ನಡೆಸುವ ಜೊತೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ “ಕೋವಿಡ್-19 ನಿಯಂತ್ರಣಕ್ಕೆ ಗ್ರಾಮ ಮಟ್ಟದಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡುವ ಮುನ್ನ ಅವರು ಮಾತನಾಡಿದರು.

ಕೋವಿಡ್ ರೋಗಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿ, ಸೋಂಕು ದೃಢಪಟ್ಟರೆ, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಬೇಕು ಎಂದು ಗ್ರಾಮೀಣ ಜನರಿಗೆ ಕೋವಿಡ್ ಕುರಿತು ಅರಿವು ಮೂಡಿಸಬೇಕು ಎಂದರು.
ಕೋವಿಡ್ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದರಿಂದ ಜೀವ ಉಳಿಸಬಹುದಾಗಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಿಸಬಹುದು ಎಂದರು.
ವೈದ್ಯರು, ನರ್ಸ್‌ಗಳು ಹಾಗೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಕರೋನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ನುಡಿದ ಅವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿರುವುದಕ್ಕೆ ಧನ್ಯವಾದ ತಿಳಿಸಿದರಲ್ಲದೆ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಕೋವಿಡ್ ರೋಗಿಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ಆರೋಗ್ಯ ಸಚಿವರಾದ ಸುಧಾಕರ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೂಕ್ತ ಔಷಧಿ ದೊರೆಯಲಿದೆ ಎಂದರು.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯವಾದ ಆಕ್ಸಿಜನ್ ತಲುಪುತ್ತಿದ್ದು, ಆಕ್ಸಿಜನ್ ಸಮಸ್ಯೆ ಇರುವುದಿಲ್ಲ. ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ವ್ಯಾಕ್ಸಿನ್ ಗಳ ಕೊರತೆಯಿದ್ದು, ಶೀಘ್ರವೇ ದೊರೆಯಲಿವೆ. ಲಸಿಕೆ ನೀಡುವಾಗ ಮೊದಲ ಆದ್ಯತೆಯಾಗಿ ಅದೇ ಜಿಲ್ಲೆಯ ಜನತೆಗೆ ಲಸಿಕೆ ನೀಡಲು ಕ್ರಮವಹಿಸಲಾಗುವುದು ಎಂದರು.
ರಾಜ್ಯದಲ್ಲಿ ಲಾಕ್‌ಡೌನ್ ಮಾಡಿರುವ ಕಾರಣದಿಂದ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಲಾಕ್‌ಡೌನ್ ಮುಂದುವರಿಸಬೇಕೋ ಅಥವಾ ಬೇಡವೇ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಮಾತನಾಡಿ, ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪ್ರತಿ ಗ್ರಾಮಗಳಿಗೆ ವೈದರ ತಂಡ ತೆರಳಿ, ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ ಎಂದರಲ್ಲದೆ, ರೋಗಲಕ್ಷಣಗಳಿರುವವರಿಗೆ ಕೋವಿಡ್ ಪರೀಕ್ಷೆ ಮಾಡಿಸಿ, ಸೋಂಕು ದೃಢಪಟ್ಟರೆ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು ಹಾಗೂ ಅವರಿಗೆ ವೈದ್ಯಕೀಯ ಕಿಟ್ ನೀಡುವಂತೆ ಸೂಚಿಸಲಾಗಿದೆ ಎಂದರು.
ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಈಗಾಗಲೇ ಆಕ್ಸಿಜನ್ ಕಾನ್ಸಟ್ರೇಟರ್ಸ್ ಗಳನ್ನು ಅಳವಡಿಸಲಾಗಿದ್ದು, ರೋಗಿಗಳಿಗೆ ಆಕ್ಸಿಜನ್ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಜನತೆ ಆತಂಕಪಡುವ ಅಗತ್ಯವಿಲ್ಲ, ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರಲ್ಲದೆ, ದೊಡ್ಡಬಳ್ಳಾಪುರದಲ್ಲಿ ಬ್ಲಾಕ್ ಫಂಗಸ್ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿಯಿದ್ದು, ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ.ಕೆ.ನಾಯಕ, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಪ್ಪೇಸ್ವಾಮಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಧರ್ಮೇಂದ್ರ, ದೇವನಹಳ್ಳಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್, ದೇವನಹಳ್ಳಿ ತಹಶೀಲ್ದಾರ್ ಅನಿಲ್ ಕುಮಾರ್, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ನಾಗರಾಜು ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವೈದ್ಯರ ತಂಡಗಳಿಗೆ ವೈದ್ಯಕೀಯ ಕಿಟ್ ಗಳನ್ನು ವಿವರಿಸಿ, ನಂತರ ಗ್ರಾಮಗಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸುವ ಮೊಬೈಲ್ ಕ್ಲಿನಿಕ್ ವಾಹನಗಳಿಗೆ ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಅಶೋಕ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
