ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ದೊಡ್ಡಬಳ್ಳಾಪುರ ತಾಲೂಕಿನ ಕೋನೇನಹಳ್ಳಿ ಮೂಲದ ಕೆ.ಸಿ.ಎನ್.ಚಂದ್ರಶೇಖರ್ (69ವರ್ಷ) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ಡಾ.ರಾಜ್ ಕುಮಾರ್ ನಟನೆಯ ಬಬ್ರುವಾಹನ, ಹುಲಿ ಹಾಲಿನ ಮೇವು, ಬಂಗಾರದ ಮನುಷ್ಯ, ಡಾ.ವಿಷ್ಣುವರ್ಧನ್ ನಟನೆಯ ಜಯಸಿಂಹ, ರೆಬಲ್ ಸ್ಟಾರ್ ಅಂಬರೀಶ್ ನಟನೆಯ ಅಂತ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದ್ದರು.
ದೊಡ್ಡಬಳ್ಳಾಪುರ ತಾಲೂಕಿನ ಕೋನೇನಹಳ್ಳಿ ಮೂಲದವರಾದ ಕೆ.ಸಿ.ಎನ್.ಚಂದ್ರಶೇಖರ್, ದೊಡ್ಡಬಳ್ಳಾಪುರದಲ್ಲಿ ಬಾಲ್ಯವನ್ನು ಕಳೆದವರು. ಕೆ.ಸಿ.ಎನ್ ಗೌಡ್ರು ಕುಟಂಬದ ಇವರು, ರಾಜಕಮಲ್ ಆರ್ಟ್ಸ್ (ದೊಡ್ಡಬಳ್ಳಾಪುರ) ಬ್ಯಾನರ್ ಅಡಿಯಲ್ಲಿ ಬಹಳಷ್ಟು ಚಿತ್ರಗಳ ನಿರ್ಮಾಣ ಮಾಡಿ, ವಿತರಕರಾಗಿದ್ದರು.
ಬೆಂಗಳೂರಿನಲ್ಲಿ ನೆಲೆನಿಂತು ರಾಜ್ಯಮಟ್ಟದಲ್ಲಿ ಹೆಸರುಗಳಿಸಿದ ಇವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದರು.
ದೊಡ್ಡಬಳ್ಳಾಪುರ ನಗರದ ರಾಜಕಮಲ್ ಚಿತ್ರಮಂದಿರ, ಬೆಂಗಳೂರಿನ ಊರ್ವಶಿ ಚಿತ್ರಮಂದಿರ, ನವರಂಗ್ ಚಿತ್ರಮಂದಿರ ಇವರ ಕುಟುಂಬದ ಒಡೆತನದ್ದಾಗಿವೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಲವು ಚಿತ್ರಗಳ ಚಿತ್ರೀಕರಣಕ್ಕೆ ಕೆಸಿಎನ್ ಚಂದ್ರು ಕಾರಣ ಎನ್ನಬಹುದಾಗಿದೆ. ರಾಜಕಮಲ್ ಆರ್ಟ್ಸ್ (ದೊಡ್ಡಬಳ್ಳಾಪುರ) ಹೆಸರಿನ ಮೂಲಕ ಇವರ ಕುಟುಂಬ ಚಿತ್ರರಂಗದಲ್ಲಿ ದೊಡ್ಡಬಳ್ಳಾಪುರದ ಕೀರ್ತಿ ಬೆಳಗಿದ್ದಾರೆ.
ಇತ್ತೀಚೆಗೆ ದೊಡ್ಡಬಳ್ಳಾಪುರ ನಗರದ ಖಾಸಗಿ ಕಾಲೇಜೊಂದರಲ್ಲಿ ನಟ ಸುಂದರ್ ರಾಜ್ ಅವರೊಂದಿಗೆ ಕೆ.ಸಿ.ಎನ್.ಚಂದ್ರು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಂದ್ರುರವರು ಕೇವಲ ಚಿತ್ರರಂಗಕ್ಕೆ ಸೀಮಿತವಾಗದೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಹೊಂದಿದ್ದು, ಹಲವಾರು ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರು.
ಮೃತರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….